ಹನ್ನೆರಡನೆಯ ಶತಮಾನದಲ್ಲಿ ವಿಚಾರವಾದಿ ಬಸವಣ್ಣನವರ ಮಾರ್ಗದರ್ಶನದಲ್ಲಿ ಶರಣರು ನಡೆಸಿದ ಅಪೂರ್ವ ಸಮಾಜೋ-ಧಾರ್ಮಿಕ
ಆಂದೋಲನ ಅಂದಿನ ಜನಸಮುದಾಯದಲ್ಲಿ ಮೂಡಿಸಿದ ನವಜಾಗೃತಿ ಲೋಕವಿದಿತ.
ಶರಣರು ಹುಟ್ಟು ಹಾಕಿದ ಪರ್ಯಾಯ ಸಂಸ್ಕೃತಿಯ ಲಿಂಗಾಯತ ಧರ್ಮ ಎಲ್ಲ ಆಘಾತಗಳನ್ನು ಸಹಿಸಿಕೊಂಡೂ ಈಗಲೂ ಜೀವಂತವಾಗಿ
ಉಳಿದುಕೊಂಡು ಬಂದಿದ್ದು, ಅದೀಗ ತನ್ನ ಸ್ವತಂತ್ರ ಅಸ್ತಿತ್ವಕ್ಕಾಗಿ ದನಿ ಎತ್ತಿರುವುದು ಅತ್ಯಂತ ಸಮರ್ಥನೀಯವಾಗಿದೆ.
ಲಿಂಗಾಯತರು ಈಗ ನಡೆಸಿರುವ ಹೋರಾಟ ವಸ್ತುಸ್ಥಿತಿಯ ಬಗೆಗೆ ಉಂಟಾಗಿರುವ ಜಾಗೃತಿಯಲ್ಲದೆ ಬೇರೆಯಲ್ಲ.
ಈ ಜಾಗೃತಿಗೆ ಬಸವಾದಿ ಶರಣರ ಪ್ರಗತಿಪರ ವಿಚಾರಧಾರೆಯೇ ಮೂಲ ಆಧಾರವೆಂದು ಬೇರೆ ಹೇಳಬೇಕಾಗಿಲ್ಲ.
ಶೈವ ಮತ್ತು ಆಗಮ ಸಿದ್ಧಾಂತಗಳನ್ನು ಅವಲಂಬಿಸಿರುವ 'ವೀರಶೈವ'ವು ವೈಚಾರಿಕ ಒರೆಗಲ್ಲಿಗೆ ನಿಲ್ಲದಿರುವ
ಕಾರಣದಿಂದಲೇ 'ಲಿಂಗಾಯತ' ಪ್ರತ್ಯೇಕ ಮತ್ತು ಸ್ವತಂತ್ರ ಧರ್ಮ ಎನ್ನುವುದು ಸ್ಪಷ್ಟವಾಗುತ್ತದೆ.
'ಅತ್ಯಂತ ಪ್ರಾಚೀನ' ಎನ್ನಲಾಗುತ್ತಿರುವ ವೀರಶೈವವೂ ಸೇರಿದಂತೆ, ಹಿಂದೂ ಧರ್ಮ ಮಾತ್ರವಲ್ಲ, ವಿಶ್ವದ ಯಾವುದೇ
ಧರ್ಮಕ್ಕಿಂತ ಭಿನ್ನವಾದ ವೈಚಾರಿಕ ಧರ್ಮ ಲಿಂಗಾಯತ ಧರ್ಮ, ಯಾವುದೇ ಸಂಪ್ರದಾಯದ ಅಥವಾ ಸನಾತನ
ಶಾಸ್ತ್ರಾಚರಣೆಗಳ ಕಟ್ಟುಪಾಡುಗಳಿಗೆ ಒಳಗಾಗದೆ, ಕೇವಲ ಮಾನವ ಘನತೆ ಮತ್ತು ಸಮಾನತೆಗಳನ್ನೇ ಮುಖ್ಯ
ಸಿದ್ಧಾಂತವನ್ನಾಗಿಟ್ಟುಕೊಂಡಿರುವ ಸಾರ್ವಕಾಲಿಕ ಅನ್ವಯದ ಅನನ್ಯತೆ ಇರುವ ಕಾರಣದಿಂದ ಲಿಂಗಾಯತ ಸ್ವತಂತ್ರ
ಧರ್ಮದ ಮನ್ನಣೆ ಪಡೆಯಲು ಅಗತ್ಯವಾದ ಎಲ್ಲ ಅರ್ಹತೆಗಳನ್ನೂ ಪಡೆದಿದೆ. ಈ ಧರ್ಮದ ವೈಶಿಷ್ಟ್ಯವೆಂದರೆ ಅದರ ಪ್ರಜಾಸತ್ತಾತ್ಮಕ ಸ್ವರೂಪ.
ಸ್ವತಂತ್ರ ಭಾರತದ ಸಂವಿಧಾನದಲ್ಲಿ ಹೇಳಿರುವ ಎಲ್ಲ ಮೂಲತತ್ತ್ವಗಳಿಗೂ ಅನ್ವಯವಾಗುವ ಲಿಂಗಾಯತ ಧರ್ಮವನ್ನು ಅರ್ಥಮಾಡಿಕೊಂಡು
ಅನುಸರಿಸುವ ಎಲ್ಲರೂ ಲಿಂಗಾಯತರೇ, ಸ್ವತಂತ್ರ ಭಾರತದ ಜಾತ್ಯಾತೀತ ಪ್ರಜಾಪ್ರಭುತ್ವದ ಎಲ್ಲ ಆಶಯಗಳನ್ನೂ 12ನೆಯ ಶತಮಾನದಷ್ಟು
ಹಿಂದೆಯೇ ಪ್ರತಿಪಾದಿಸಿದ ಧರ್ಮ ಲಿಂಗಾಯತ ಧರ್ಮ ಎನ್ನುವುದನ್ನು ನಾವಾರೂ ಮರೆಯಬಾರದು.
ಈ ಭೂಮಿಕೆಯಲ್ಲಿ ಇಂದಿನ ಮತ್ತು ಮುಂದೆಂದಿನ ಕಾಲಮಾನಕ್ಕೆ ಸಮುಚಿತವಾಗಿ ಸಲ್ಲುವ ಲಿಂಗಾಯತ ಧರ್ಮಕ್ಕೆ ಸಂವಿಧಾನಾತ್ಮಕ
ಮನ್ನಣೆ ದೊರಕಬೇಕು ಎನ್ನುವ ಉದ್ದೇಶದಿಂದ ಸ್ಥಾಪಿತವಾಗಿರುವ ಸಂಸ್ಥೆಯೇ ಜಾಗತಿಕ ಲಿಂಗಾಯತ ಮಹಾಸಭಾ.
ಯಾವುದೇ ದೇಶದಲ್ಲಿ ಅಲ್ಲಿನ ಸಂವಿಧಾನಕ್ಕೆ ಅಲ್ಲಿನ ಪ್ರತಿಯೊಬ್ಬ ಪ್ರಜೆಯೂ ಬದ್ಧವಾಗಿರಬೇಕು.
ಭಾರತದ ಸಂವಿಧಾನ ಪ್ರಜಾಪ್ರಭುತ್ವವನ್ನು ಅಂಗೀಕರಿಸಿರುವ ಸಂವಿಧಾನ. ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯಕ್ಕೆ ಮನ್ನಣೆ.
ಅದರಂತೆ ಜಾಗತಿಕ ಲಿಂಗಾಯತ ಮಹಾಸಭಾದ ಆಶಯ ಜನಾಭಿಪ್ರಾಯದ್ದೇ ಆಗಿದೆ ಮತ್ತು ಪ್ರಜಾಸತ್ತಾತ್ಮಕವಾಗಿದೆ.
ಇದು ವೈಚಾರಿಕ ಕಾಲಮಾನ, ವೈಜ್ಞಾನಿಕ ಕಾಲಮಾನ. ಇಂದಿನ ಯುವಜನಾಂಗ ಯಾವುದನ್ನೂ ಪ್ರಶ್ನಿಸದೆ, ತಮ್ಮ ಪ್ರಶ್ನೆಗಳಿಗೆ
ಸಮರ್ಥ ಉತ್ತರ ದೊರಕದೆ ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ, ಕರ್ಮಠತನದ ಬಂಧನಗಳಿಂದ ಮುಕ್ತವಾದ, ಸರ್ವ ಸಮಾನತೆಯ
ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಶರಣ ಸಿದ್ಧಾಂತ ಅವರಿಗೆ ಸಹಜವಾಗಿಯೇ ಒಪ್ಪಿಗೆಯಾಗುತ್ತದೆ. ಆಧುನಿಕ ವಿಚಾರವಾದಿಗಳೆಲ್ಲ
ಯಾವುದೇ ಜಾತಿ-ಮತ, ಪಂಥ-ಪಂಗಡಗಳ ಭೇದವಿಲ್ಲದೆ ವಚನ ಸಾಹಿತ್ಯವನ್ನು ಹೃದಯದಿಂದ ಒಪ್ಪಿಕೊಂಡಿರುವುದೇ ಇದಕ್ಕೆ ಸಾಕ್ಷಿ.
ಸಂಪ್ರದಾಯ ಅಸಂಪ್ರದಾಯ, ಸನಾತನ-ವಿನೂತನ, ಪ್ರತಿಗಾಮಿ-ಪ್ರಗತಿಗಾಮಿ, ಅಂಧಶ್ರದ್ಧೆ-ವೈಚಾರಿಕ ಇತ್ಯಾದಿ ದ್ವಂದ್ವಗಳ
ಮಧ್ಯೆ ಸಂಘರ್ಷ ಇದ್ದದ್ದೇ. ಆದರೆ ಧರ್ಮ ಮತ್ತು ಸಮಾಜಗಳನ್ನು ಪೂರ್ಣ ಮಾನವೀಯತೆಯ ಆಧಾರದ ಮೇಲೆ, ನೈತಿಕ
ನೆಲಗಟ್ಟಿನ ಮೇಲೆ ನಿಲ್ಲಿಸಿದ ಬಸವಣ್ಣನವರ ವಿಚಾರಧಾರೆ ಅಂತಹ ಸಂಘರ್ಷಕ್ಕೆ ಒಳಗಾಗಬೇಕಾಗಿಲ್ಲ. ಏಕೆಂದರೆ ಲೋಕದ
ಜನ ಸಮುದಾಯವನ್ನು ಇಂದು ಕಾಡುತ್ತಿರುವ ಅನೇಕ ದ್ವಂದ್ವಗಳಿಗೆ ಲಿಂಗಾಯತ ಧರ್ಮ ಸಿದ್ಧಾಂತ ಕಾರ್ಯಸಾಧ್ಯ ಉತ್ತರವಾಗುತ್ತವೆ.
ಜಾಗತಿಕ ಲಿಂಗಾಯತ ಮಹಾಸಭಾ ಕೇವಲ ಅಂಗದ ಮೇಲೆ ಲಿಂಗವಿದ್ದವರಿಗಾಗಿ ಸೀಮಿತ ವಾದ ಸಂಸ್ಥೆಯಲ್ಲ.
ಶರಣ ಸಿದ್ಧಾಂತದಂತೆ ಶ್ರಮದ ದುಡಿಮೆ, ಸಮಾನ ಹಂಚಿಕೆ, ಅಂತರಂಗದ ಚಿಂತನೆ (ಕಾಯಕ-ದಾಸೋಹ- ಅನುಭವ)
ಈ ವಿಚಾರಧಾರೆಯನ್ನು ಒಪ್ಪಿ ಅನುಸರಿಸುತ್ತಿರುವ ಸಕಲ ದೀನ-ದಲಿತರ ಸಂಸ್ಥೆಯೂ ಹೌದು.