Newsletters: Volume - 1, Issue - 1

ವಾರ್ತಾಪತ್ರ Newsletter
Volume - 1, Issue - 1
26-Mar-2025
ಜಾಗತಿಕ ಲಿಂಗಾಯತ ಮಹಾಸಭಾ, ವಿಶ್ವಗುರು ಕಾಂಪ್ಲೆಕ್ಸ್, ೪ನೇ ಮಹಡಿ, ಕೊಲ್ಹಾಪುರ ಕತ್ತರಿ, ಬೆಳಗಾವಿ
Jagatika Lingayat Mahasabha, Vishwaguru Complex, 4th floor, Kolhapur cross, Belagavi
Note: Athour's opinions are not opinions of organization nor editors.
ಪ್ರಧಾನ ಸಂಪಾದಕರ ನುಡಿ
ಜಾಲಿಂಮ ವಾರ್ತಾಪತ್ರ: ಸಮುದಾಯದ ಏಕತೆಗಾಗಿ
ಜಾಗತಿಕ ಲಿಂಗಾಯತ ಮಹಾಸಭೆ (ಜಾಲಿಂಮ) ರಾಜ್ಯದ ಲಿಂಗಾಯತ ಸಮುದಾಯದ ಪ್ರಮುಖ ಪ್ರಾತಿನಿಧಿಕ ಸಂಘಟನೆಯಾಗಿ ಬೆಳೆಯುತ್ತಿದೆ. ಕೆಲವೇ ವರ್ಷಗಳಲ್ಲಿ, ಇದು ದೊಡ್ಡ ಸಂಸ್ಥೆಯಾಗಿ ವಿಕಸಿಸಿದೆ. ಲಿಂಗಾಯತ ಧರ್ಮ ಮತ್ತು ಬಸವಣ್ಣನವರ ಮೇಲೆ ನಡೆಯುತ್ತಿರುವ ಆಕ್ರಮಣಗಳನ್ನು, ಬ್ರಾಹ್ಮಣ್ಯದ ವಿಕೃತಿಗಳನ್ನು ಎದುರಿಸುತ್ತಿರುವ ಯಾವುದಾದರೂ ಸಂಘಟನೆ ಇದ್ದರೆ ಅದು ಜಾಲಿಂಮ. ರಾಜ್ಯದ ಅನೇಕ ಜಿಲ್ಲೆಗಳು, ತಾಲ್ಲೂಕುಗಳು ಮತ್ತು ನಗರಗಳಲ್ಲಿ ಇದರ ಶಾಖೆಗಳು ಸ್ಥಾಪಿತವಾಗುತ್ತಿವೆ. ಅನೇಕ ಲಿಂಗಾಯತ ಅನುಯಾಯಿಗಳು ತಮ್ಮ ಸ್ಥಳೀಯತೆಯಲ್ಲಿ ಲಿಂಗಾಯತ ಧರ್ಮ ಕಾರ್ಯಾಗಾರಗಳನ್ನು, ನಿಜಾಚರಣೆ ಕುರಿತು ತರಬೇತಿ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ.ಈ ಕಾರ್ಯಗಳು ಲಿಂಗಾಯತ ಧರ್ಮದ ಬೋಧನೆಗಳನ್ನು ಪ್ರಚಾರ ಮಾಡುವಲ್ಲಿ ಮತ್ತು ಸಮುದಾಯದ ಏಕತೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿವೆ.
ಒಂದು ಸಂಘಟನೆಯು ಬೆಳೆಯಲು, ಅದರ ಚಟುವಟಿಕೆಗಳ ಬಗ್ಗೆ ಸದಸ್ಯರು, ಪದಾಧಿಕಾರಿಗಳು, ಲಿಂಗಾಯತ ಮಠಗಳು ಮತ್ತು ಮಠಾಧೀಶರಿಗೆ ಮಾಹಿತಿ ದೊರಕಬೇಕು. ಈ ಉದ್ದೇಶಕ್ಕಾಗಿ, ಜಾಗತಿಕ ಲಿಂಗಾಯತ ಮಹಾಸಭೆ (ಜಾಲಿಂಮ) ಒಂದು ವಾರ್ತಾಪತ್ರವನ್ನು ಸಿದ್ಧಪಡಿಸುತ್ತಿದೆ. ಅದರ ಮೊದಲ ಸಂಚಿಕೆಯನ್ನು ಫೆಬ್ರವರಿ 27, 2025ರಂದು ಬೆಂಗಳೂರಿನ ಬಸವ ಸಮಿತಿಯಲ್ಲಿ ವಚನ ದರ್ಶನ: ಮಿಥ್ಯ vs ಸತ್ಯ ಎಂಬ ಕೃತಿಯ ಬಿಡುಗಡೆ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು. ಈ ಪುಸ್ತಕದ ಪರಿಚಯವನ್ನು ಸಂಚಿಕೆಯ ಬೇರೆ ಭಾಗದಲ್ಲಿ ನೀಡಲಾಗಿದೆ. ಬ್ರಾಹ್ಮಣ್ಯವು ನೀಡುವ ಅಜೆಂಡಾಗೆ ಪ್ರತಿಕ್ರಿಯೆ ನೀಡುವ ಕಾಲ ಮುಗಿದಿದೆ; ಈಗ ಲಿಂಗಾಯತವು ಬ್ರಾಹ್ಮಣ್ಯಕ್ಕೆ ಅಜೆಂಡಾ ನೀಡುತ್ತದೆ.
ಅಖಿಲ ಭಾರತ ಸಾಂಸ್ಕೃತಿಕ ಸಂಘಟನೆಗೆ ಲಿಂಗಾಯತವು ಎದುರಾಗಿ ನಿಲ್ಲುತ್ತದೆ. ಲಿಂಗಾಯತ ಸಮುದಾಯಕ್ಕೆ ಒಳಗೂ ಹೊರಗೂ ವಿರೋಧಿಗಳು ಇದ್ದಾರೆ. ಇಂದು, ಒಳಗಿನ ವಿರೋಧಿಗಳು ಜಾಗತಿಕ ಲಿಂಗಾಯತ ಮಹಾಸಭೆಯ (ಜಾಲಿಂಮ) ಜೊತೆ ಕೈಜೋಡಿಸಿದ್ದಾರೆ. ಹೊರಗಿನ ಶಕ್ತಿಗಳ ವಿರುದ್ಧ ಸಂಘಟಿತ ಹೋರಾಟದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ, ಸಹೃದಯರು ಈ ವಾರ್ತಾಪತ್ರವನ್ನು ಸ್ವಾಗತಿಸುತ್ತಾರೆ ಎಂದು ನಾವು ಭಾವಿಸುತ್ತೇವೆ.
ಈ ಸಂಚಿಕೆಯು ಒಳಗೊಂಡಿರುವ ವಿವಿಧ ಅಂಕಣಗಳು, ವಿಷಯ ಮಂಡನೆ, ಮತ್ತು ವ್ಯಕ್ತಿ ಪರಿಚಯಗಳ ಬಗ್ಗೆ ನಿಮ್ಮ ಸಲಹೆ-ಸೂಚನೆಗಳನ್ನು ನೀಡಬಹುದು. ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುವ ಲಿಂಗಾಯತ ಕಾರ್ಯಕ್ರಮಗಳ ವರದಿಗಳನ್ನು ಈ ವಾರ್ತಾಪತ್ರದಲ್ಲಿ ನೀಡಲಾಗುತ್ತದೆ.
- ಡಾ. ಟಿ. ಆರ್. ಚಂದ್ರಶೇಖರ
ಸಂಪಾದಕರ ನುಡಿ
ಲಿಂಗಾಯತ ಜಾಗೃತಿ - ಸಮುದಾಯದ ಧ್ವನಿ
ಜಾಗತಿಕ ಲಿಂಗಾಯತ ಮಹಾಸಭಾ ವಾರ್ತಾಪತ್ರಿಕೆಯ ಮೊದಲ ಹೆಜ್ಜೆ
ಜಾಗತಿಕ ಲಿಂಗಾಯತ ಮಹಾಸಭೆಯು (ಜಾಲಿಂಮ) ಶರಣ ಪರಂಪರೆಯ ದೀಪ್ತಿಯನ್ನು ವಿಶ್ವದಾದ್ಯಂತ ಹರಡುವ ಮಹತ್ವಾಕಾಂಕ್ಷೆಯೊಂದಿಗೆ ತನ್ನ ಮೊದಲ ವಾರ್ತಾಪತ್ರಿಕೆಯನ್ನು ಪ್ರಾರಂಭಿಸುತ್ತಿದೆ. ಶತಮಾನಗಳಿಂದ ವಚನ ಸಾಹಿತ್ಯವು ಪ್ರಬುದ್ಧ ಚಿಂತನೆ, ಸಾಮಾಜಿಕ ನ್ಯಾಯ ಮತ್ತು ಸತ್ಯಶೋಧನೆಯ ಶಕ್ತಿಯಾಗಿದೆ. ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯವು ತಲುಪಿದ ಎಲ್ಲೆಡೆ ಜಾಗೃತಿಯ ಬೆಳಕನ್ನು ಹರಡಿದೆ.
ಇಂದು, ಜಾಗತಿಕ ಲಿಂಗಾಯತ ಮಹಾಸಭೆ ಈ ಪವಿತ್ರ ಪರಂಪರೆಯನ್ನು ಮತ್ತಷ್ಟು ಗಾಢವಾಗಿ ಶಕ್ತಿಗೊಳಿಸಲು, ಲಿಂಗಾಯತ ಧರ್ಮದ ಮೌಲ್ಯಗಳನ್ನು ವಿಶ್ವ ಮಟ್ಟದಲ್ಲಿ ಹರಡುವ ಸಲುವಾಗಿ, ಈ ವಾರ್ತಾಪತ್ರಿಕೆಯನ್ನು ಪ್ರಾರಂಭಿಸುತ್ತಿದೆ. ಈ ಪತ್ರಿಕೆ ಲಿಂಗಾಯತ ಧರ್ಮದ ತತ್ವಗಳ ಸಂಚಿಕೆಯಾಗಿದ್ದು, ಅದು ನಮ್ಮ ಸಮುದಾಯದ ಚಟುವಟಿಕೆಗಳನ್ನು, ವೈಚಾರಿಕತೆಯನ್ನು, ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಡೆಯುವ ಹೋರಾಟಗಳನ್ನು ಪ್ರತಿಬಿಂಬಿಸುತ್ತದೆ. ಲಿಂಗಾಯತ ಧರ್ಮದ ಮೌಲ್ಯಗಳನ್ನು ಪ್ರಸಾರ ಮಾಡುವುದರ ಜೊತೆಗೆ ಬ್ರಾಹ್ಮಣ್ಯ ಮತ್ತು ಸಮಾಜದಲ್ಲಿ ಇರುವ ಅಜ್ಞಾನದ ವಿರುದ್ಧ ಸತ್ಯವನ್ನು ಪ್ರತಿಪಾದಿಸುವ ಉದ್ದೇಶವನ್ನು ಹೊಂದಿದೆ.
ಇತ್ತೀಚಿನ ದಿನಗಳಲ್ಲಿ, ಲಿಂಗಾಯತ ಧರ್ಮವನ್ನು ದುರ್ಬಲಗೊಳಿಸಲು ಕೆಲವು ಶಕ್ತಿಗಳು ತಮ್ಮ ಯೋಜನೆಗಳನ್ನು ಜಾರಿಗೆ ತರುವ ಪ್ರಯತ್ನದಲ್ಲಿವೆ. ಆದರೆ, ಲಿಂಗಾಯತ ಧರ್ಮವು ತನ್ನದೇ ಆದ ಧ್ವನಿಯನ್ನು, ಚಿಂತನೆಗಳನ್ನು ಮತ್ತು ಮಾರ್ಗವನ್ನು ಸ್ಥಾಪಿಸುವ ದೃಢತೆಯನ್ನು ಹೊಂದಿದೆ. ಈ ವಾರ್ತಾಪತ್ರಿಕೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಿಂಗಾಯತ ಧರ್ಮದ ವ್ಯಾಪ್ತಿಯನ್ನು ವಿಸ್ತರಿಸುವ ಪ್ರಮುಖ ವೇದಿಕೆಯಾಗಲಿದೆ.
ಈ ಪ್ರಥಮ ಸಂಚಿಕೆ ವಿಶೇಷವಾಗಿದೆ; ಇದು ಫೆಬ್ರವರಿ 27, 2025 ರಂದು ಬೆಂಗಳೂರಿನಲ್ಲಿ ನಡೆಯುವ "ವಚನ ದರ್ಶನ”: ಮಿಥ್ಯ vs ಸತ್ಯ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿದೆ. ಇದು ಕೇವಲ ವಾರ್ತಾಪತ್ರವಲ್ಲ, ನಮ್ಮ ಧರ್ಮದ ಪರಂಪರೆಯ ಪುನರುಜ್ಜೀವನದ ಒಂದು ವಿಶಿಷ್ಟ ಪ್ರಯತ್ನವಾಗಿದೆ.
ಈ ಪ್ರಯತ್ನದಲ್ಲಿ ಎಲ್ಲರ ಸಹಕಾರ ಅವಶ್ಯಕವಾಗಿದೆ. ನಮ್ಮ ಧ್ವನಿಯು ಶಕ್ತಿಯಾಗಬೇಕಾದರೆ, ಪ್ರತಿಯೊಬ್ಬರೂ ಅದನ್ನು ಪೋಷಿಸಬೇಕು. ಈ ವಾರ್ತಾಪತ್ರಿಕೆಗೆ ನಿಮ್ಮ ಅಭಿಪ್ರಾಯ, ಸಲಹೆ ಮತ್ತು ಬೆಂಬಲ ಅತ್ಯಂತ ಅಮೂಲ್ಯವಾಗಿದೆ. ಲಿಂಗಾಯತ ಧರ್ಮದ ಸತ್ಯ, ಶರಣ ಪರಂಪರೆಯ ಶ್ರೇಷ್ಠತೆ ಮತ್ತು ವಚನ ಚಿಂತನೆಯ ಬೆಳಕನ್ನು ಪ್ರಪಂಚದೆಲ್ಲೆಡೆ ಹರಡೋಣ.
- ಡಾ. ಮುಕ್ತಾ ಬಿ. ಕಾಗಲಿ
ಜಾಗತಿಕ ಲಿಂಗಾಯತ ಮಹಾಸಭೆಯ ವತಿಯಿಂದ ಒಂದು ಮಾಸಿಕ ಆನ್‌ಲೈನ್ ನಿಯತಕಾಲಿಕೆ ಮತ್ತು ಮಹಾಸಭೆಯ ಸುದ್ದಿಪತ್ರಿಕೆಯನ್ನು ಪ್ರಕಟಿಸುವ ಬಗ್ಗೆ ಒಂದು ವರ್ಷದ ಹಿಂದೆ ನಿರ್ಣಯಿಸಲಾಗಿತ್ತು. ವೇಗವಾಗಿ ಬೆಳೆಯುತ್ತಿರುವ ಮಹಾಸಭೆಗೆ ತನ್ನ ಎಲ್ಲ ಕಾರ್ಯಕ್ರಮಗಳ ಬಗ್ಗೆ ಸಕಾಲದಲ್ಲಿ ಸಕಲರಿಗೂ ತಿಳಿಸಲು ಈ ಪತ್ರಿಕೆ ತುಂಬ ಸಹಕಾರಿಯಾಗಬಲ್ಲದು. ಅಲ್ಲದೇ ವಚನ ಸಾಹಿತ್ಯ, ಶರಣರ ಚರಿತ್ರೆಗಳು, ಲಿಂಗಾಯತ ಧರ್ಮದ ಇತಿಹಾಸ, ತತ್ವ ದರ್ಶನ, ಮತ್ತು ಲಿಂಗಾಯತ ಚಳುವಳಿಯು ಈ ನಾಡಿನ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ರಂಗಗಳ ಮೇಲೆ ಬೀರಿದ ಪ್ರಭಾವ ಇತ್ಯಾದಿಗಳ ಬಗ್ಗೆ ತಜ್ಞ ಪ್ರಬಂಧಗಳನ್ನು ಪ್ರಕಟಿಸಲು ಸಾಧ್ಯವಾಗುತ್ತದೆ.
ಸಂಪಾದಕೀಯ ಬರಹದ ಮೂಲಕ ಮಾಸ ಪತ್ರಿಕೆ ಲಿಂಗಾಯತ ಸಮುದಾಯವನ್ನು ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಉದ್ಭವಿಸುವ ಬೆಳವಣಿಗೆಗಳ ಬಗ್ಗೆ ಎಚ್ಚರಿಸಲು ಮತ್ತು ಸಮುದಾಯದ ಮೇಲೆ ಗಾಢ ಪ್ರಭಾವ ಬೀರುವ ಸಮಸ್ಯೆಗಳ ಕುರಿತು ಜಾಗೃತಿಯನ್ನು ಮೂಡಿಸಲು ಭೂಮಿಕೆಯನ್ನು ಒದಗಿಸುತ್ತದೆ
ಜಾಗತಿಕ ಲಿಂಗಾಯತ ಮಹಾಸಭೆಯು ತನ್ನ ಮಾಸಿಕ ಆನ್‌ಲೈನ್ ನಿಯತಕಾಲಿಕೆ ಮತ್ತು ಸುದ್ದಿಪತ್ರಿಕೆಯನ್ನು ಪ್ರಕಟಿಸಲು ಅಗತ್ಯವಾದ ವೆಬ್‌ಸೈಟ್ ಅನ್ನು ಅಭಿವೃದ್ಧಿಪಡಿಸಿದೆ. ಸಂಪಾದಕ ಮಂಡಳಿಯ ಸಲಹೆಗಾರರಾಗಿ ನುರಿತ ತಜ್ಞರು ಸೇವೆ ಸಲ್ಲಿಸಲು ಒಪ್ಪಿದ್ದಾರೆ. ಸಂಪಾದಕರಾಗಿ ಡಾ. ಮುಕ್ತಾ ಬಿ. ಕಾಗಲಿ ಮತ್ತು ಪ್ರಧಾನ ಸಂಪಾದಕರಾಗಿ ಡಾ. ಟಿ.ಆರ್. ಚಂದ್ರಶೇಖರ ಅವರು ಕಾರ್ಯನಿರ್ವಹಿಸಲು ಒಪ್ಪಿದ್ದಾರೆ. ಈ ಎಲ್ಲಾ ಕಾರ್ಯಗಳು ಈಗ ಪೂರ್ಣಗೊಂಡಿದ್ದು, ಅವರ ಸಹಕಾರದಿಂದ ಮಾಸಿಕ ಪತ್ರಿಕೆಯ ಪ್ರಥಮ ಸಂಪುಟದ ಪ್ರಥಮ ಸಂಚಿಕೆ ಹೊರಬರುತ್ತಿದೆ.
ಜಾಗತಿಕ ಲಿಂಗಾಯತ ಮಹಾಸಭೆಯು ಫೆಬ್ರವರಿ 27, 2025, ಗುರುವಾರ ಬೆಳಿಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ತನ್ನ ಮಾಸಿಕ ಆನ್‌ಲೈನ್ ನಿಯತಕಾಲಿಕೆಯ ಪ್ರಥಮ ಸಂಚಿಕೆಯನ್ನು ಬಿಡುಗಡೆ ಮಾಡಲಿದೆ. ಈ ಸಮಾರಂಭದಲ್ಲಿ ಇನ್ನೆರಡು ಮಹತ್ವದ ಗ್ರಂಥಗಳ ಬಿಡುಗಡೆ ಕೂಡ ನಡೆಯಲಿದೆ. ಈ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದರಲ್ಲಿ ನಮಗೆ ಸಂತೋಷವಾಗಿದೆ.
ಮಾಸ ಪತ್ರಿಕೆಯಲ್ಲಿ, ಎಲ್ಲಾ ಜಿಲ್ಲೆಗಳಲ್ಲಿ ನಡೆಯುವ ಕಾರ್ಯಕ್ರಮಗಳ ವಿವರಗಳನ್ನು ಮುಂಚೆಯೇ ತಿಳಿಸಿದಲ್ಲಿ, ಅವುಗಳನ್ನು ಸುದ್ದಿ ಮತ್ತು ಮುಂಬರುವ ಕಾರ್ಯಕ್ರಮಗಳ ಕಾಲಮಗಳಲ್ಲಿ ಪ್ರಕಟಿಸಲು ಸಾಧ್ಯವಾಗುತ್ತದೆ.
ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ನಡೆದ ಎಲ್ಲಾ ಲಿಂಗಾಯತ ಸಂಬAಧಿತ ಕಾರ್ಯಕ್ರಮಗಳ ಫೋಟೋಗಳು ಮತ್ತು ಸಂಕ್ಷಿಪ್ತ ವರದಿಗಳನ್ನು, ಸಂಬAಧಿತ ಜಿಲ್ಲೆ, ತಾಲೂಕು, ಮತ್ತು ನಗರಗಳ ಪದಾಧಿಕಾರಿಗಳು ಸಂಗ್ರಹಿಸಿ ಕಳುಹಿಸಲು ವಿನಂತಿಸುತ್ತೇವೆ. ಈ ಮಾಹಿತಿಯನ್ನು ನೇರವಾಗಿ ಜೆಎಲ್‌ಎಂ ಕಚೇರಿಯ ಶ್ರೀ ಸಾಗರ ಅಕ್ಕಿ ಅಥವಾ ಸಂಪಾದಕಿ ಡಾ. ಮುಕ್ತಾ ಕಾಗಲಿ ಅವರಿಗೆ ಸಲ್ಲಿಸಲು ಕೋರಲಾಗಿದೆ. ಜೆಎಲ್‌ಎಂ ನ ಎಲ್ಲಾ ಸದಸ್ಯರು ಮತ್ತು ಪದಾಧಿಕಾರಿಗಳು ಈ ಪತ್ರಿಕೆಯನ್ನು ತಪ್ಪದೇ ಓದಿದರೆ, ನಮ್ಮ ಶ್ರಮ ಸಾರ್ಥಕವೆಂದು ಭಾವಿಸುತ್ತೇವೆ.
ದಿನಾಂಕ: 21-2-2025
ಮುಕ್ತಾ ಬಿ ಕಾಗಲಿ
ಸಂಪಾದಕರು
ಜಾಗತಿಕ ಲಿಂಗಾಯತ ಮಹಾಸಭಾ ವಾರ್ತಾಪತ್ರ
ಬೆಂಗಳೂರು
ನಾವೆಲ್ಲ ವಿಜ್ಞಾನ, ಪ್ರಚಾರ ಮತ್ತು ತಾಂತ್ರಿಕ ಯುಗದಲ್ಲಿದ್ದೇವೆ. ಇವತ್ತು ಶಿಕ್ಷಣ ಮಾಹಿತಿ ಪ್ರತಿಯೊಬ್ಬರಿಗೂ ಮುಟ್ಟಬೇಕು ಎನ್ನುವ ತವಕ. ಈ ನೆಲೆಯಲ್ಲಿ 'ಜಾಗತಿಕ ಲಿಂಗಾಯತ ಮಹಾಸಭಾ' ವಾತಾಪತ್ರವನ್ನು ಆನ್‌ಲೈನ್ ಮೂಲಕ ಲೋಕಾರ್ಪಣೆ ಮಾಡಲಿರುವುದು ಅಭಿನಂದನಾರ್ಹ.
ಲಿAಗಾಯತ ಒಂದು ಸ್ವತಂತ್ರ ಧರ್ಮ, ಬಸವಣ್ಣನವರು ಈ ಧರ್ಮದ ಸಂಸ್ಥಾಪಕರು. ಅವರು ಧರ್ಮದ ಸಂಕೇತವಾಗಿ ಕೊಟ್ಟದ್ದು ಇಷ್ಟಲಿಂಗವನ್ನು. ಇದರ ಜೊತೆಗೆ ಆದರ್ಶ ಬದುಕಿಗಾಗಿ ಕಾಯಕ ಮತ್ತು ತತ್ವಗಳನ್ನು ಕರುಣಿಸಿದ್ದಾರೆ. ಅವರು 'ಕಾಯಕವೆಕೈಲಾಸ' ಎನ್ನದೆ 'ಕಾಯವೆ ಕೈಲಾಸ' ಎಂದಿದ್ದಾರೆ. ಅಂದರೆ ಕಾಯಶುದ್ಧಿಗೆ ಶರಣರಂತೆ ಒತ್ತು ಕೊಟ್ಟ ಮತ್ತೊಬ್ಬ ದಾರ್ಶನಿಕರನ್ನು ಇತಿಹಾಸದಲ್ಲಾಗಲಿ, ವರ್ತಮಾನದಲ್ಲಾಗಲಿ ಕಾಣುವುದು ತುಂಬಾ ವಿರಳ.
'ದಯವೆ ಧರ್ಮದ ಮೂಲ' ಎನ್ನುವುದು ಬಸವಸಿದ್ಧಾಂತ. ಅವರು ಸಕಲ ಜೀವಾತ್ಮರಿಗೆ ಒಳಿತು ಬಯಸಿದರು. 'ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ' ಎನ್ನುವ ಮೂಲಕ ತಮ್ಮ ಘನತೆಯನ್ನು ಮೆರೆದದ್ದಲ್ಲದೆ ಕಲ್ಯಾಣದಲ್ಲಿ ಅದ್ಭುತ ಪರಿವರ್ತನೆಯನ್ನು ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ತರಲು ಸಾಧ್ಯವಾಯಿತು. ಅವರದು ಯಾವಾಗಲೂ 'ಬಾಗಿದ ತಲೆ, ಮುಗಿದ ಕೈ'.
ಬಸವಣ್ಣನವರ ಪಾರದರ್ಶಕ ದಿವ್ಯ ವ್ಯಕ್ತಿತ್ವಕ್ಕೆ ತಲೆ ಬಾಗದವರೇ ಇಲ್ಲ. ಹಾಗಾಗಿ ಅನುಭಾವಿ ಅಲ್ಲಮಪ್ರಭುದೇವರು 'ಬಸವಣ್ಣ ಎನಗೆಯೂ ಗುರು, ನಿನಗೆಯೂ ಗುರು, ಜಗವೆಲ್ಲಕ್ಕೆಯೂ ಗುರು' ಎಂದು ಸ್ಪಷ್ಟಪಡಿಸಿದ್ದಾರೆ. ಅಂಥ ಬಸವಾದಿ ಶಿವಶರಣರ ಸಂದೇಶ ಸಾರುವ, ವಚನಗಳು ಪ್ರತಿಪಾದಿಸುವ ತತ್ವಗಳನ್ನು ಸರಳವಾಗಿ ಸಹೃದಯಿ ಓದುಗರಿಗೆ ಮುಟ್ಟಿಸುವ ಕಾರ್ಯ ತಮ್ಮ ಸಂಪಾದಕತ್ವದಲ್ಲಿ ಹೊರಬರುವ ವಾರ್ತಾಪತ್ರದಲ್ಲಿ ನಡೆಯಬೇಕು. ಅದರ ವಿನ್ಯಾಸ ಮತ್ತು ವಿಷಯ ಪ್ರತಿಪಾದನೆ ಎಲ್ಲ ವರ್ಗದ ಓದುಗರನ್ನು ಸೆಳೆಯುವಂತಿರಬೇಕು ಎನ್ನುವುದು ನಮ್ಮ ಬಯಕೆ ಮತ್ತು ಹಾರೈಕೆ.
ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಪಟ್ಟಾಧ್ಯಕ್ಷರು, ಶ್ರೀ ತರಳಬಾಳು ಜಗದ್ಗುರು ಶಾಖಾಮಠ
ಸಾಣೇಹಳ್ಳಿ – 577 515
ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ
Ph: 94483 95594, email: swamiji.ps@gmail.com
ದಿನಾಂಕ: 18.02.2025
ಧರ್ಮಗುರು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮದ ಒಳಪಂಗಡಗಳಲ್ಲಿ ಸಾಮರಸ್ಯವನ್ನು ಸಾಧಿಸುವ ಮತ್ತು ಅವೈದಿಕ ಧರ್ಮಗಳಲ್ಲಿ ಒಂದಾದ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಯನ್ನು ಪಡೆಯುವ ಉದ್ದೇಶದಿಂದ ರೂಪುಗೊಂಡ ಸಂಸ್ಥೆ ಜಾಗತಿಕ ಲಿಂಗಾಯತ ಮಹಾಸಭಾ. ಕಳೆದ ನಾಲೈದು ವರ್ಷಗಳಿಂದ ಲಿಂಗಾಯತ ಧರ್ಮದ ಐಕ್ಯತೆ ಹಾಗೂ ಸಮಗ್ರತೆಗಾಗಿ ನಿರಂತರ ಶ್ರಮಿಸುತ್ತಿರುವ ಈ ಸಂಸ್ಥೆಯು ಅನೇಕ ಮೌಲಿಕ ಗ್ರಂಥಗಳನ್ನು ಪ್ರಕಟಿಸಿ ಲಿಂಗಾಯತರಲ್ಲಿ ಜಾಗೃತಿಯನ್ನುಂಟುಮಾಡುತ್ತಿದೆ. ಈ ಮಹತ್ಕಾರ್ಯದ ಮುಂದುವರಿದ ಭಾಗವಾಗಿ 'ಆನಲೈನ್ ಸುದ್ದಿಪತ್ರಿಕೆ'ಯೊಂದನ್ನು ಪ್ರಕಟಿಸಲು ಮುಂದಾದುದು ಅಭಿನಂದನೀಯ ಸಂಗತಿ.
ಉತ್ತಮ ಸಮಾಜದ ನಿರ್ಮಾಣ ಹಾಗೂ ಸಂಘಟನೆಯ ಕಾರ್ಯದಲ್ಲಿ ಪತ್ರಿಕೆಗಳ ಪಾತ್ರ ಗಮನಾರ್ಹ. ಅವು ಜನರಲ್ಲಿ ವೈಚಾರಿಕತೆಯನ್ನು ಬೆಳೆಸುವುದಲ್ಲದೆ ವ್ಯಕ್ತಿಯ ವ್ಯಕ್ತಿತ್ವದ ವಿಕಾಸಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತವೆ. ಸಾರ್ವಜನಿಕರಲ್ಲಿ ಅವು ನಿರಂತರ ಅರಿವನ್ನು ಮೂಡಿಸುತ್ತ ಜನಜೀವನದ ಭಾಗವಾಗಿ ಬೆಳೆದು ನಿಂತಿವೆ. ಈ ದಿಶೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯವರು ಪ್ರಕಟಿಸಲು ಉದ್ದೇಶಿಸಿರುವ “ಆನ್‌ಲೈನ್ ಸುದ್ದಿಪತ್ರಿಕೆ' ಯು ಬಸವಾದಿ ಶರಣರ ತತ್ವಾದರ್ಶಗಳನ್ನು ಜನಮನಕ್ಕೆ ತಲುಪಿಸುವುದರ ಜೊತೆಗೆ ಲಿಂಗಾಯತರಲ್ಲಿ ಧರ್ಮ, ತತ್ತ್ವಜ್ಞಾನ, ಇತಿಹಾಸ ಕುರಿತಾದ ವಾಸ್ತವಿಕ ಅರಿವನ್ನು ಮೂಡಿಸುವ ಮತ್ತು ಲಿಂಗಾಯತ ಯುವಕರ ಉದ್ಯೋಗಾವಕಾಶಗಳ ದೃಷ್ಟಿಯಿಂದ ಅವರಲ್ಲಿ ಕೌಶಲ್ಯಾಭಿವೃದ್ಧಿಯನ್ನು ಹೆಚ್ಚಿಸುವ ಮಹತ್ಕಾರ್ಯವನ್ನು ಪೂರೈಸುವಂತಾಗಲಿ ಎಂದು ಹೃದಯಾರೆ ಹಾರೈಸುವೆವು.
ಜಯಬಸವ
ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು
ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ,
ಡಂಬಳ-ಗದಗ
Mob.: 9036638827 Email: jtmathgadag.no1@gmail.com
ಜಾಗತಿಕ ಲಿಂಗಾಯತ ಮಹಾಸಭೆಯು ಆನ್ ಲೈನ್ ಸುದ್ದಿಪತ್ರಿಕೆಯನ್ನು ಹೊರತರುತ್ತಿರುವ ಈ ಹರ್ಷದ ಸಂದರ್ಭದಲ್ಲಿ, ಸಮುದಾಯದ ಎಲ್ಲ ಸದಸ್ಯರಿಗೆ ಹೃತ್ಪೂರ್ವಕ ಶುಭಾಶಯಗಳು. ಈ ಸುದ್ದಿಪತ್ರಿಕೆ ಶರಣರ ತತ್ವಗಳು, ಆಧುನಿಕ ಸವಾಲುಗಳು ಮತ್ತು ಯುವಜನರ ಪಾತ್ರವನ್ನು ಚರ್ಚಿಸುವ ಮೂಲಕ, ಸಮುದಾಯದ ಏಕತೆ, ಸೌಹಾರ್ದತೆ ಮತ್ತು ಅಭಿವೃದ್ಧಿಗೆ ಮಹತ್ವದ ವೇದಿಕೆಯಾಗಲಿ.
ಶಿಕ್ಷಣ, ಉದ್ಯೋಗ ಮತ್ತು ಮಹಿಳಾ ಸಬಲೀಕರಣದಂತಹ ಕ್ಷೇತ್ರಗಳಲ್ಲಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಈ ಸುದ್ದಿಪತ್ರಿಕೆ ಕೊಡುಗೆ ನೀಡುವಂತಾಗಲಿ. ಇದು ಆತ್ಮೀಯ ಲಿಂಗಾಯತ ಬಂಧುಗಳಿಗೆ ಪ್ರೇರಣೆಯ ರೂಪವಾಗಿದ್ದು, ಲೇಖಕರು, ಸಂಪಾದಕರ ಪರಿಶ್ರಮದಿಂದ ಹುಟ್ಟಿದ ಈ ಪತ್ರಿಕೆ, ಶರಣ ತತ್ವಗಳನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ
ನಮ್ಮ ಸಮುದಾಯದ ಬೃಹತ್ ಪರಿವಾರದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಬಗ್ಗೆ ಪ್ರತಿಬಿಂಬಿಸುವ ಈ ಸುದ್ದಿಪತ್ರಿಕೆ, ಪ್ರತಿ ಸದಸ್ಯನಿಗೂ ಪ್ರೇರಣೆಯ ಬುನಾದಿಯಂತೆ ಕಾರ್ಯನಿರ್ವಹಿಸಲಿ. ಸಮುದಾಯದ ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ, ಭಾವೈಕ್ಯತೆಯಿಂದ ಮತ್ತು ಪರಸ್ಪರ ಸಹಕಾರದಿಂದ ಮುಂದೆ ಸಾಗಲು ಪ್ರೇರೇಪಣೆಯಾಗಿ ಈ ಪತ್ರಿಕೆ ಸ್ಪೂರ್ತಿ ನೀಡಲಿ.
ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತಿಬಿಂಬವಾಗಿ, ಧರ್ಮದ ತತ್ವಗಳನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸಲು ಮತ್ತು ಇಂದಿನ ಆಧುನಿಕ ಸವಾಲುಗಳನ್ನು ಎದುರಿಸಲು, ಈ ಸುದ್ದಿಪತ್ರಿಕೆ ಪ್ರಮುಖ ಸಾಧನವಾಗಿರಲಿ.
ಭಾರತದ ಪ್ರತಿಯೊಬ್ಬ ಲಿಂಗಾಯತ ಬಂಧುಗಳಿಗೆ ಈ ಪತ್ರಿಕೆ ಪ್ರೇರಣೆಯಾಗಿ, ಶರಣ ಸಂಸ್ಕೃತಿಯ ಶ್ರೇಷ್ಠತೆಯನ್ನು ಹರಡಲು ಸಹಕಾರಿ ಆಗಲಿ ಎಂಬುದು ನನ್ನ ಹಾರೈಕೆ.
ಬಸವರಾಜ ಹೊರಟ್ಟಿ
ಅಧ್ಯಕ್ಷರು, ಕರ್ನಾಟಕ ವಿಧಾನ ಪರಿಷತ್ತು
ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಆನ್ ಲೈನ್ ನ್ಯೂಸ್ ಲೆಟರ್ ಹೊರತರುತ್ತಿರುವುದು ಸಂತಸದ ವಿಷಯ. ಮಹಾಸಭಾದ ಸರ್ವ ಸದಸ್ಯರಿಗೆ, ಅವರ ಕುಟುಂಬಸ್ಥರಿಗೆ ಹಾಗೂ ಹಿತೈಷಿಗಳಿಗೆ ನ್ಯೂಸ್ ಲೆಟರ್ ಮುಖಾಂತರ ಜಾಗತಿಕ ಲಿಂಗಾಯತ ಮಹಾಸಭೆಯ ಕಾರ್ಯಚಟುವಟಿಕೆಗಳು ಇನ್ನು ಹೆಚ್ಚೆಚ್ಚು ಜನರಿಗೆ ತಲುಪಲು ಅನುಕೂಲವಾಗುತ್ತದೆ.
ಕರ್ನಾಟಕದ, ಹೊರರಾಜ್ಯದ ಮತ್ತು ವಿವಿಧ ದೇಶಗಳಲ್ಲಿ ವಾಸಿಸುವ ಸಮಸ್ತ ಬಸವ ಅಭಿಮಾನಿಗಳನ್ನು ತಾವು ಸದಸ್ಯರನ್ನಾಗಿ ಮಾಡಿಕೊಂಡು ಅವರಿಗೆ ನಿಯಮಿತವಾಗಿ ನ್ಯೂಸ್ ಲೆಟರ್ ತಲುಪಿಸಬೇಕು. ವಿಶೇಷವಾಗಿ ಯುವ ಸಮುದಾಯವನ್ನು ತಾವು ಗಮನದಲ್ಲಿಟ್ಟು ಅಂತವರನ್ನು ಹೆಚ್ಚು ಚಂದಾದಾರರನ್ನಾಗಿ ಮಾಡಿ, ಅವರಿಗೆ ಈ ನ್ಯೂಸ್ ಲೆಟರ್ ತಲುಪಿದರೆ, ಬಸವಾದಿ ಶರಣರ ಸಂದೇಶಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಅವರ ಜವಾಬ್ದಾರಿ ಹೆಚ್ಚುತ್ತದೆ. ಅಲ್ಲದೇ, ಮುಂದಿನ ತಲೆಮಾರಿಗೆ ಈ ವಿಚಾರಧಾರೆಯನ್ನು ತಲುಪಿಸಿದಂತಾಗುತ್ತದೆ.
ಗೊ.ರು.ಚನ್ನಬಸಪ್ಪನವರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಕಟ್ಟಿ ಬೆಳೆಸುವ ಮೂಲಕ ಶರಣ ಸಾಹಿತ್ಯಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿರುತ್ತಾರೆ. ಇದೀಗ ಅವರ ಪುತ್ರಿ ಮುಕ್ತಾ ಕಾಗಲಿ ನ್ಯೂಸ್ ಲೆಟರ್ ಸಂಪಾದಕತ್ವವನ್ನು ವಹಿಸಿಕೊಂಡಿರುವುದು ಅತ್ಯಂತ ಅಭಿಮಾನದ ಸಂಗತಿ, ಮುಕ್ತಾ ಅವರ ದಕ್ಷತೆ ಕಾರ್ಯ ನಿಷ್ಠೆ, ಶ್ರದ್ಧೆ ಈ ನ್ಯೂಸ್ ಲೆಟರ್ ನಲ್ಲಿ ಮಿಲಿತಗೊಳ್ಳಲಿದೆ. ನಿಯಮಿತವಾಗಿ ಇದು ಪ್ರಕಟವಾಗಿ ಹೆಚ್ಚು ಜನರನ್ನು ತಲುಪಿ ಬಸವಾದಿ ಶರಣರ ಸಂದೇಶಗಳು ಎಲ್ಲರ ಮನೆ-ಮನಗಳಲ್ಲಿ ಮುಟ್ಟಲಿ.
ಎಂ.ಬಿ ಪಾಟೀಲ
ಅಧ್ಯಕ್ಷರು, ಭಾರತೀಯ ಲಿಂಗಾಯತ ಡೆವಲೆಪಮೆಂಟ್ ಏಜುಕೇಶನಲ್ ಅಸೋಸಿಯೇಶನ್ ವಿಜಯಪುರ, ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು.
‘ನೀನೊಲಿದಡೆ ಕೊರಡು ಕೊನರುವುದಯ್ಯಾ, ನೀನೊಲಿದಡೆ ಬರಡು ಹಯನಹುದಯ್ಯಾ, ನೀನೊಲಿದಡೆ ವಿಷವೆಲ್ಲ ಅಮೃತವಹುದಯ್ಯಾ, ನೀನೊಲಿದಡೆ ಸಕಲ ಪಡಿಪದಾರ್ಥ ಇದಿರಲ್ಲಿರ್ಪುವು ಕೂಡಲಸಂಗಮದೇವಾ’. ಇದು ಬಸವಣ್ಣನವರ ಅರ್ಥಪೂರ್ಣ ವಚನ. ಇಲ್ಲಿ ಯಾರು ಒಲಿದರೆ ಕೊರಡು ಚಿಗುರುತ್ತದೆ, ಗೊಡ್ಡು ಹಸು ಹಾಲು ಕರೆಯುತ್ತದೆ. ವಿಷ ಅಮೃತವಾಗುತ್ತದೆ, ಬಯಸಿದ ಪದಾರ್ಥಗಳೆಲ್ಲ ಕಣ್ಣೆದುರು ಕಾಣಿಸಿಕೊಳ್ಳುತ್ತವೆ ಎನ್ನುವುದು ಮುಖ್ಯ ಪ್ರಶ್ನೆ. ಬಹುತೇಕರು ಭಗವಂತನ ಒಲುಮೆಯಾದರೆ ಅಸಾಧ್ಯವೂ ಸಾಧ್ಯ ಎಂದು ಈ ವಚನದ ವಿಶ್ಲೇಷಣೆ ಮಾಡುವುದುಂಟು. ಹಾಗಾದರೆ ಒಣಗಿದ ಮರದ ತುಂಡು ಮತ್ತೆ ಚಿಗುರಲು, ಗೊಡ್ಡು ಬಿದ್ದ ಹಸು ಹಾಲು ಕರೆಯಲು, ಸಾವಿಗೆ ಕಾರಣವಾಗುವ ವಿಷ ಅಮೃತವಾಗಲು, ಬಯಸಿದ ಪದಾರ್ಥಗಳೆಲ್ಲ ಎದುರಿಗೆ ಬರಲು ಸಾಧ್ಯವೇ? ದೇವರ ಒಲುಮೆಯಿಂದ ಇವೆಲ್ಲ ಸಾಧ್ಯವಾಗುವುದಾದರೆ ಈ ಜಗತ್ತಿನಲ್ಲಿ ಏನೆಲ್ಲ ಪವಾಡಗಳು ಆಗಬೇಕಿತ್ತು. ದೇವರ ಒಲುಮೆಯಿಂದ ಇವೆಲ್ಲ ಸಾಧ್ಯ ಎನ್ನುವ ಅರ್ಥ ಈ ವಚನದಲ್ಲಿ ಇರಲಾರದು. ಇದು ದೇವರಿಗೆ ಎನ್ನುವುದಕ್ಕಿಂತ ಮನುಷ್ಯನ ಬದುಕಿಗೇ ಸಂಬಂಧಿಸಿದ ವಚನ ಎನ್ನುವುದು ನಮ್ಮ ಅಭಿಪ್ರಾಯ. ವಾಸ್ತವವಾಗಿ ಎಷ್ಟೋ ಮನುಷ್ಯರು ಜೀವಂತ ಇದ್ದರೂ ಅವರು ಒಣಗಿದ ಕಟ್ಟಿಗೆಯ ತುಂಡಿನಂತೆ, ಗೊಡ್ಡು ಬಿದ್ದ ಹಸುವಿನಂತೆ, ವಿಷದ ಹಾವಿನಂತೆ ಇರುತ್ತಾರೆ. ಅಂಥವರು ಕಾಯಕಶೀಲರಾದರೆ, ಸುಜ್ಞಾನಿಗಳಾದರೆ, ವಿಚಾರ-ವಿವೇಕ ಅಳವಡಿಸಿಕೊಂಡು ನೀತಿವಂತರಾಗಿ, ಸಾತ್ವಿಕರಾಗಿ ಬಾಳುವುದನ್ನು ರೂಢಿಸಿಕೊಂಡರೆ ಅವರ ಕೊರಡುತನ ಕಳೆದು ಜೀವನೋತ್ಸಾಹ ಪುಟಿಯುತ್ತದೆ. ಹಾಲಿನಂಥ ಶುದ್ಧ ಬದುಕನ್ನು ಸಾಗಿಸಲು ಸಾಧ್ಯವಾಗುತ್ತದೆ. ಅವನ ಬಾಯಿಂದ ವಿಷಕಕ್ಕುವ ಮಾತುಗಳ ಬದಲಾಗಿ ಅಮೃತದಂತಹ ನುಡಿಗಳು ಹೊರಹೊಮ್ಮುತ್ತವೆ. ಈ ನೆಲೆಯಲ್ಲಿ ಅನೇಕ ಶರಣರು, ಸಾಧು-ಸಂತರು ಸಾತ್ವಿಕ ಜೀವನ ನಡೆಸುತ್ತ, ಕಾಯಕ ಪ್ರಜ್ಞೆಯುಳ್ಳವರಾಗಿ, ಸಮಾಜಕ್ಕೆ ಬೆಳಕನ್ನು ಕೊಡುತ್ತ ಬಂದಿದ್ದಾರೆ. ಹಾಗೆ ಬೆಳಕು ಕೊಡಲು ಕಾರಣ ಅವರ ಅಧ್ಯಯನ, ವಿವೇಕ, ಸಾಧನೆ, ಅನುಭಾವ ಮತ್ತು ಸಾತ್ವಿಕ ಗುಣ. ಇವುಗಳ ಮೂಲಕ ವ್ಯಕ್ತಿ ಶರಣನಾಗಲು, ಅನುಭಾವಿಯಾಗಲು, ಗೌರವಾದರ ಪಡೆಯಲು ಸಾಧ್ಯ.
ಈ ನೆಲೆಯಲ್ಲೇ ಅನೇಕ ಮಠಗಳ ಹಿಂದಿನ ಸ್ವಾಮಿಗಳು ತಮ್ಮ ಉತ್ತರಾಧಿಕಾರಿಗಳಿಗೆ ನಿನ್ನ ಕೊರಡುತನ ಕಳೆದುಕೊಂಡು ಸದಾ ಚಿಗುರುವ, ಹೂ-ಹಣ್ಣು ಕೊಡುವ ಮರದಂತೆ ಆಗಬೇಕು, ಭಕ್ತರಿಗೆ ಹಾಲುಣ್ಣಿಸುವ ಹಸುವಾಗಬೇಕು, ವಿಷಯುಕ್ತ ವಿಚಾರಗಳನ್ನು ದೂರತಳ್ಳಿ ಅಮೃತಯುಕ್ತ ನುಡಿಗಳ ಮೂಲಕ ಭಕ್ತರ ಬದುಕಿಗೆ ಹೊಸ ದಿಕ್ಕು ತೋರಿಸುವಂತೆ ಆಗಬೇಕು; ಆಗ ಏನೆಲ್ಲ ಸಾಧನೆ ಮಾಡಲು ಸಾಧ್ಯ ಎನ್ನುವ ಉಪದೇಶ ಮಾಡುವರು. ಒಬ್ಬರು ಒಂದು ಮಠದ ಪಟ್ಟಾಧ್ಯಕ್ಷರಾಗುತ್ತಲೇ ಅವರ ಪೂರ್ವಾಶ್ರಮದ ರಕ್ತ ಸಂಬಂಧವನ್ನು ಮನದಿಂದ ಕಿತ್ತೆಸೆಯಬೇಕು. ಆದರೆ ಇಂದು ಬಹುತೇಕ ಮಠಗಳಲ್ಲಿ ರಕ್ತಸಂಬಂಧ ಇನ್ನಷ್ಟು ಗಟ್ಟಿಗೊಳ್ಳುತ್ತಿರುವುದನ್ನು ನೋಡಬಹುದಾಗಿದೆ. ಕೆಲವು ಮಠಗಳ ಸ್ವಾಮಿಗಳು ತಮ್ಮ ಮಠದಲ್ಲಿರುವವರ ಪರಿಚಯ ಮಾಡುವಾಗ ಇವರು ನಮ್ಮ ತಂದೆ, ತಾಯಿ, ಅಣ್ಣ, ಅತ್ತಿಗೆ, ತಂಗಿ ಎಂದೆಲ್ಲ ಹೇಳುವರು. ಅವರಿಗೆ ತಮ್ಮ ತಕ್ತಸಂಬಂಧವೇ ಮುಖ್ಯವಾಗಿರುತ್ತದೆ. ಸಮಾಜಮುಖಿ ಸ್ವಾಮಿಗೆ ಬೇಕಾದದ್ದು ಮತ್ತು ಇರಬೇಕಾದ್ದು ರಕ್ತಸಂಬಂಧವಲ್ಲ; ಭಕ್ತಸಂಬಂಧ. ಅಂದರೆ ಇವರು ನಮ್ಮ ಮಠದ ಪರಮಭಕ್ತರು, ಇವರು ನಮ್ಮ ಮಠದ ಆಸ್ತಿ. ಇವರು ಇಂಥ ಕೆಲಸ ಮಾಡುತ್ತಿದ್ದಾರೆ. ಇವರು ಮಠದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತ ಬಂದವರು ಎಂದೆಲ್ಲ ಹೇಳುವಂತೆ ಆಗಬೇಕು. ರಕ್ತಸಂಬಂಧವೇ ಪ್ರಧಾನವಾಗಿ ಭಕ್ತಸಂಬಂಧ ಗೌಣವಾದರೆ ಆ ಮಠಕ್ಕೆ ಅದೊಂದು ಕಪ್ಪು ಚುಕ್ಕಿ.
ಇಂದು ಕೆಲವು ಮಠಗಳಲ್ಲಿ ಬೇರೆ ಬೇರೆ ಕಾರಣಕ್ಕೆ ತೊಟ್ಟಿಲು ಕಟ್ಟುತ್ತಿರುವುದನ್ನು ಕಾಣುತ್ತೇವೆ. ನಮ್ಮ ಗುರುವರ್ಯರಾದ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು 1937-38ರಲ್ಲಿ ದಿನಚರಿಯನ್ನು ಬರೆಯುತ್ತಿದ್ದರು. ಅಂಥ ದಿನಚರಿಯನ್ನು ಸಂಪಾದಿಸಿ ಇಂದಿನ ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ‘ಆತ್ಮನಿವೇದನೆ’ ಎನ್ನುವ ಹೆಸರಿನಲ್ಲಿ ಹೊರತಂದಿದ್ದಾರೆ. ಆ ಕೃತಿಯಲ್ಲಿ ಅನೇಕ ಸ್ವಾಮಿಗಳ ಬದುಕಿನ ವಿಧಾನವನ್ನು ಯಥಾವತ್ತಾಗಿ ಕಟ್ಟಿಕೊಟ್ಟಿದ್ದಾರೆ. `ಶಿಷ್ಯರ ಹಣವನ್ನು ತೆಗೆದುಕೊಂಡು ಹೋಗಿ ಮಠದಲ್ಲಿರುವ ತಮ್ಮ ಅಣ್ಣ ತಮ್ಮಂದಿರ ಹೆಂಡಿರು ಮಕ್ಕಳುಗಳಿಗೆ ಹಾಕುವ ನಾಮಧಾರಿ ಗುರುಗಳು ಸಮಾಜದಿಂದ ತೊಲಗದವರೆಗೆ ನಮಗೆ ಕಲ್ಯಾಣವಿಲ್ಲ. ಇವರು ಅಣ್ಣ ತಮ್ಮಂದಿರ ಹೆಂಡತಿಯರಲ್ಲಿ ಪ್ರೇಮವನ್ನು ಬೆಳೆಸಿಕೊಂಡು ಅವರ ಗಂಡಂದಿರಿಗೆ ದುಡಿಯುವುದನ್ನಾದರೂ ತಪ್ಪಿಸುತ್ತಾರೆಂಬುದೊಂದು ಮಹೋಪಕಾರವೆಂದು ಭಾವಿಸಬೇಕಾಗಿದೆ. ಮಠಗಳಲ್ಲಿ ಸಂಭೋಗ, ತೊಟ್ಟಿಲು ಕಟ್ಟುವುದು ಇತ್ಯಾದಿ ಗೃಹಸ್ಥ ಧರ್ಮ ಕಾರ್ಯಗಳು ನಡೆಯುವಾಗ ಆ ಮಠಗಳು ಪಾಪಕ್ಷೇತ್ರವಾಗುವುದರಲ್ಲಿ ಸಂದೇಹವಿಲ್ಲ, ಆ ಪಾಪಕ್ಷೇತ್ರಗಳಲ್ಲಿ ಬಂದು ನಮಸ್ಕರಿಸುವ ಶಿಷ್ಯವರ್ಗಕ್ಕೆ ಕಲ್ಯಾಣವಾಗುತ್ತೆಂಬುದು ಶುದ್ಧ ಅಸಂಗತ. ಅಕ್ಕ ತಂಗಿಯರನ್ನು ಸಾಕಲು ಮಠವನ್ನು ಮಾಡಬೇಕೇ?’ ಹೀಗೆ ಇನ್ನೂ ತುಂಬಾ ಕಟುವಾಗಿ ಬರೆದಿದ್ದಾರೆ. ಒಂದು ಮಠದ ಸ್ವಾಮಿಯಾದವ ಎಲ್ಲ ಬಂಧನಗಳನ್ನೂ ಕಳಚಿಕೊಂಡು ನಿರ್ಲಿಪ್ತನಾಗಿರಬೇಕು. ವಿಶ್ವವೇ ತನ್ನದು ಎನ್ನುವ ವಿಶಾಲ ಮನೋಭಾವನೆ ಬೆಳೆಸಿಕೊಳ್ಳಬೇಕು. ಎಲ್ಲ ಭಕ್ತರನ್ನೂ ಶಿವಸ್ವರೂಪಿಗಳು ಎನ್ನುವ ಭಾವನೆಯಿಂದ ನೋಡಬೇಕು. ಅವನಲ್ಲಿ ಸ್ವಾರ್ಥಪರ ಕಾಮನೆಗಳು, ಕ್ರೋಧ, ಲೋಭ, ಮೋಹ, ಮದ, ಮತ್ಸರ ಇತ್ಯಾದಿ ದುರ್ಗುಣಗಳು ಇರಬಾರದು. ಆಗ ಅವನ ಸ್ವಾಮಿತನಕ್ಕೆ ವಿಶೇಷ ಮನ್ನಣೆ ಬರಲು ಸಾಧ್ಯ.
ಸ್ವಾಮಿ ಅಥವಾ ಗುರು-ಜಗದ್ಗುರು ಮೌಢ್ಯಗಳಿಂದ ಮುಕ್ತರಾಗಿರಬೇಕು. ವಿಷಾದದ ಸಂಗತಿ ಎಂದರೆ ಇವತ್ತು ಅನೇಕ ಮಠಗಳು ಮೌಢ್ಯಗಳನ್ನು ಬಿತ್ತಿ ಬೆಳೆಯುವ ಕೇಂದ್ರಗಳಾಗುತ್ತಲಿವೆ. ಹಾಗಾಗಿ ಅವು ಸನ್ಮಾರ್ಗದಲ್ಲಿ ಕರೆದೊಯ್ಯುವಲ್ಲಿ ಸೋಲುತ್ತಿವೆ. ಈ ನೆಲೆಯಲ್ಲೇ ಬಸವಣ್ಣನವರು ಹೇಳಿದ್ದು: ನೀರ ಕಂಡಲ್ಲಿ ಮುಳುಗುವರಯ್ಯಾ, ಮರನ ಕಂಡಲ್ಲಿ ಸುತ್ತುವರಯ್ಯಾ, ಬತ್ತುವ ಜಲವ, ಒಣಗುವ ಮರನ ಮಚ್ಚಿದವರು ನಿಮ್ಮನೆತ್ತ ಬಲ್ಲರು? ಕೂಡಲಸಂಗಮದೇವಾ. ಯಾವುದೋ ನದಿಯಲ್ಲಿ, ತೀರ್ಥಕ್ಷೇತ್ರದಲ್ಲಿ ಮುಳುಗೆದ್ದರೆ ಮಾಡಿದ ಪಾಪಗಳೆಲ್ಲ ದೂರವಾಗುವವು ಎನ್ನುವ ನಂಬಿಕೆ ಇದೆ. ಅದಕ್ಕಾಗಿ ಕುಂಭಮೇಳ ಇತ್ಯಾದಿ ನಡೆಯುತ್ತಲಿವೆ. ಆದರೆ ಬಸವಣ್ಣನವರ ಪ್ರಶ್ನೆ ಹಾಗೆ ಹರಿಯುವ ನದಿಯ ಅಥವಾ ತೀರ್ಥಕ್ಷೇತ್ರದ ನೀರು ಒಂದಿಲ್ಲೊಂದು ದಿನ ಬತ್ತಿಹೋಗುತ್ತದೆ. ಅಂಥ ನೀರು ಹೇಗೆ ಪವಿತ್ರವಾಗುತ್ತದೆ? ಏನೇನೋ ಹರಕೆ ಕಟ್ಟಿಕೊಂಡು ಮರ ಸುತ್ತುವವರಿಗೂ ನಮ್ಮಲ್ಲಿ ಕೊರತೆ ಇಲ್ಲ. ಅಂಥ ಮರವನ್ನು ಸುತ್ತುವುದರಿಂದ ತಮ್ಮ ಮನದ ಆಸೆಗಳೆಲ್ಲ ಫಲಿಸುತ್ತವೆ ಎನ್ನುವ ನಂಬಿಕೆ. ಆದರೆ ಅಂಥ ಮರ ಕೂಡ ಒಂದಿಲ್ಲೊಂದು ದಿನ ಒಣಗುವುದು. ಒಣಗುವ ಮರ ಹೇಗೆ ಮಾನವನ ಆಸೆಗಳನ್ನೆಲ್ಲ ಈಡೇರಿಸಲು ಸಾಧ್ಯ? ಹಾಗಾಗಿ ಬತ್ತುವ ಜಲವನ್ನು, ಒಣಗುವ ಮರವನ್ನು ನಂಬಿದ ಜನರು ನೈಜ ದೇವರನ್ನು ಅರಿಯಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಇಂಥ ಹಲವಾರು ವಿಚಾರಗಳನ್ನು ಬಸವಾದಿ ಶರಣರು ತಮ್ಮ ವಚನಗಳಲ್ಲಿ ಪ್ರಸ್ತಾಪಿಸಿ ಮನುಷ್ಯ ಮೂಢನಂಬಿಕೆ, ಅಜ್ಞಾನದಿಂದ ಮುಕ್ತನಾಗಬೇಕೆಂದು ಹೇಳಿದ್ದಾರೆ. ದೇವರ ಸ್ವರೂಪವನ್ನು ಹೇಳುವಾಗ ಆ ಚೇತನ ಜಗದಗಲ, ಮುಗಿಲಗಲ, ಮಿಗೆಯಗಲ ಎನ್ನುವರು. ದೇವರು ಸರ್ವವ್ಯಾಪಿ, ಸರ್ವಶಕ್ತ, ಸರ್ವಜ್ಞ. ದೇವರಿಲ್ಲದ ಸ್ಥಳವೇ ಇಲ್ಲ. ಆದರೆ ಜನರು ದೇವರಿಗೆ ಸೀಮಿತ ಚೌಕಟ್ಟು ಕಲ್ಪಿಸಿ ಗುಡಿ ಗೋಪುರ ನಿರ್ಮಾಣ ಮಾಡಿದ್ದಾರೆ, ಮಾಡುತ್ತಲಿದ್ದಾರೆ. ಮನುಷ್ಯ ಗುಡಿಗೆ ಹೋದಾಗ ಮಾತ್ರ ಶುದ್ಧಿಯುಳ್ಳವನಾಗಿರಬೇಕು. ಅಲ್ಲಿಂದ ಹೊರಬಂದಾಗ ಅವನ ಭಾವನೆಗಳು ಶುದ್ಧವಾಗಿ ಇರಬಾರದೇ? ಗುಡಿಯಲ್ಲಿರುವ ದೇವರು ಗುಡಿಯ ಹೊರಗೆ ಇಲ್ಲವೇ? ಎಲ್ಲೆಡೆ ದೇವರು ಇರುವನೆಂಬ ಭಾವನೆ ಬಂದಾಗ ಮನುಷ್ಯ ಅನಾಚಾರಗಳಿಂದ ಮುಕ್ತನಾಗಿ ಸದಾಚಾರದಿಂದ ವರ್ತಿಸಲು ಸಾಧ್ಯ.
ಗುಡಿಯಲ್ಲಿ ಮಾತ್ರ ದೇವರಿದ್ದಾನೆ ಎಂದರೆ ಅಲ್ಲಿಂದ ಹೊರಬಂದಮೇಲೆ ಏನು ಮಾಡಿದರೂ ನೋಡುವವರಿಲ್ಲ ಎನ್ನುವ ತಪ್ಪು ಕಲ್ಪನೆ ಬರುತ್ತದೆ. ಪೂಜಾರಿ ಪುರೋಹಿತರು ಗುಡಿಗಳ ಗುಂಗನ್ನು ಜನರ ತಲೆಯಲ್ಲಿ ತುಂಬಿ ಅವರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಇದರಲ್ಲಿ ಮಠಾಧೀಶರ ಪಾತ್ರವೂ ಇಲ್ಲ ಎನ್ನಲಾಗದು. ಹಾಗಾಗಿ ಮಠಾಧೀಶರಾದವರು ಮತ್ತು ಮಠಾಧೀಶರಾಗುವವರು ಶರಣರ ಸಂದೇಶಗಳನ್ನು ಯಥಾವತ್ತಾಗಿ ಅಧ್ಯಯನ ಮಾಡಬೇಕು. ವ್ಯಕ್ತಿ ಮಠದ ಸ್ವಾಮಿಯಾಗುವುದು ದೊಡ್ಡದಲ್ಲ. ಚಿಕ್ಕವಯಸ್ಸಿನಲ್ಲೇ ಸ್ವಾಮಿಗಳಾದರೆ ಏನು ಸಾಧನೆ ಮಾಡಲು ಸಾಧ್ಯ ಎನ್ನುವ ಅನುಮಾನವೂ ಬೇಕಿಲ್ಲ. 12ನೆಯ ಶತಮಾನದಲ್ಲಿ ಚೆನ್ನಬಸವಣ್ಣನವರು ಹಾಗೂ ಅಕ್ಕಮಹಾದೇವಿಯವರು ತುಂಬಾ ಚಿಕ್ಕ ವಯಸ್ಸಿನವರು. ಅನುಭವ ಮಂಟಪದಲ್ಲಿ ಏನಾದರೂ ತಾತ್ವಿಕ ಚಿಂತನೆ ನಡೆದಾಗ ಇದಕ್ಕೆ ಚೆನ್ನಬಸವಣ್ಣನವರು ಏನು ಹೇಳುತ್ತಾರೆ ಎಂದು ಎಲ್ಲ ಶರಣರು ಅವರ ಉತ್ತರಕ್ಕಾಗಿ ಕಾಯುತ್ತಿದ್ದರು. ಅಲ್ಲಮಪ್ರಭುವಿನಂಥ ಹಿರಿಯ ಅನುಭಾವಿಗಳು ಸಹ ಮಹಾದೇವಿಯಕ್ಕನ ಶ್ರೀಪಾದಕ್ಕೆ ನಮೋ ನಮೋ ಎಂದು ಗೌರವಿಸಿದ್ದಾರೆ. ಚೆನ್ನಬಸವಣ್ಣ ಹಾಗೂ ಅಕ್ಕನ ಆದರ್ಶ ಚಿಕ್ಕ ಮತ್ತು ಹಿರಿಯ ವಯಸ್ಸಿನ ಸ್ವಾಮಿಗಳಿಗೆ ಬೇಕಾಗುತ್ತದೆ. ಇದಕ್ಕೆ ಸಾತ್ವಿಕ ಗುಣ, ವಿನಯ ಮತ್ತು ವಿವೇಕದ ಅಗತ್ಯವಿದೆ. ಕೆಲವೊಮ್ಮೆ ಬಾಲ್ಯದಲ್ಲೇ ಪಟ್ಟ ಕಟ್ಟುವರು. ಅಂಥವರಿಗೆ ಭಕ್ತರು ನಮಸ್ಕರಿಸಿ ಕಾಣಿಕೆ ಸಲ್ಲಿಸುವುದು ಸಹಜ. ಇದರಿಂದ ಅವರಲ್ಲಿ ಅಹಂಕಾರ ಹೆಡೆಯಾಡಬಾರದು.
`ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ, ಏಡಿಸಿ ಕಾಡಿತ್ತು ಶಿವನ ಡಂಗುರ. ಮಾಡಿದೆನೆನ್ನದಿರಾ ಲಿಂಗಕ್ಕೆ, ಮಾಡಿದೆನೆನ್ನದಿರಾ ಜಂಗಮಕ್ಕೆ, ಮಾಡಿದೆನೆಂಬುದು ಮನದಲ್ಲಿಲ್ಲದಿದ್ದಡೆ, ಬೇಡಿತ್ತನೀವ ಕೂಡಲಸಂಗಮದೇವ’. ಸ್ವಾಮಿಗಳಿಗೆ ನಾನು ಮಾಡಿದೆ, ನಾನು ನೀಡಿದೆ, ನನ್ನಿಂದಲೇ ಇದೆಲ್ಲ ಆಗಿದ್ದು ಎನ್ನುವ ಅಹಂಭಾವ ಇರಬಾರದು. ಅವರು ಅಹಂಕಾರದಿಂದ ಮುಕ್ತರಾಗಬೇಕು. `ಸದುವಿನಯವೆ ಸದಾಶಿವನ ಒಲುಮೆಯಯ್ಯಾ’ ಎನ್ನುವ ವಿನಮ್ರತೆ ಇರಬೇಕು. ಎಲ್ಲ ಭಕ್ತರನ್ನು ಸಮಾನವಾಗಿ ಕಾಣಬೇಕು. ಅಲ್ಲಿ ಬಡವ-ಶ್ರೀಮಂತ, ವಿದ್ಯಾವಂತ-ಅವಿದ್ಯಾವಂತ, ಅಧಿಕಾರಿ-ರಾಜಕಾರಣಿ ಈ ರೀತಿಯ ತಾರತಮ್ಯ ಮಾಡಬಾರದು. ಸ್ವಾಮಿಗಳಾದವರು ಅಧ್ಯಯನ ಪ್ರವೃತ್ತಿ ಬೆಳೆಸಿಕೊಂಡು ಸಾಕಷ್ಟು ಜ್ಞಾನ ಸಂಪಾದನೆ ಮಾಡಿಕೊಳ್ಳುತ್ತಿರಬೇಕು. ಧರ್ಮ, ಸಾಹಿತ್ಯ, ವಿಜ್ಞಾನ, ಸಮಾಜ, ಪರಿಸರ ಹೀಗೆ ಬೇರೆ ಬೇರೆ ಕ್ಷೇತ್ರಗಳಿಗೆ ಸಂಬಂಧಿಸಿದ ಅತ್ಯುತ್ತಮ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಓದಿದ್ದನ್ನು ಅರಿಗಿಸಿಕೊಳ್ಳಬೇಕು. ಅರಗಿಸಿಕೊಂಡದ್ದನ್ನ ಆಚರಣೆಯಲ್ಲಿ ತರುವ ಪ್ರಯತ್ನ ಮಾಡಬೇಕು. ಆಗ ಅವರು ಶರಣರಂತೆ, ಅನುಭಾವಿಗಳಂತೆ ಆಗಲು ಸಾಧ್ಯ. ಶರಣ ಅಥವಾ ಅನುಭಾವಿ ಆಗುವುದು ಸುಲಭದ ಕಾರ್ಯವಲ್ಲ. ಅದರ ಹಿಂದೆ ಸತತ ಸಾಧನೆ ಬೇಕು. ಅಂಥ ಸಾಧನೆ ಸ್ವಾಮಿಗಳದಾದರೆ ಅವರು ಸಮಾಜದ ಜನರ ಅಜ್ಞಾನ ನಿವಾರಿಸಿ ಅವರನ್ನು ಬೆಳಕಿನತ್ತ ಕರೆದೊಯ್ಯಲು ಸಾಧ್ಯ. ಇವತ್ತು ಜನರು ಸ್ವಾಮಿಗಳನ್ನು ಅತ್ಯಂತ ಗೌರವ, ಸದ್ಭಾವನೆಯಿಂದ ಕಾಣುವರು. ಸ್ವಾಮಿಗಳಿಗಿಂತ ಹೆಚ್ಚು ಬುದ್ಧಿವಂತರು, ಮೇಧಾವಿಗಳು. ವಿಚಾರವಂತರು, ನೀತಿವಂತರು ಭಕ್ತರಲ್ಲೇ ಬೇಕಾದಷ್ಟು ಜನರಿದ್ದಾರೆ. ಅವರಿಗೆ ಇಲ್ಲದ ಗೌರವ ಸ್ವಾಮಿಗಳಿಗೆ ಇದೆ ಎಂದರೆ ಅದಕ್ಕೆ ಕಾರಣ ಅವರು ಧರಿಸಿರುವ ಲಾಂಭನ. ಅಂದರೆ ಕಾವಿ ಬಟ್ಟೆ.
ಕಾವಿ ಬಟ್ಟೆ ಧರಿಸಿದವರು ಭಕ್ತರಿಗಿಂತಲೂ ಪರಿಶುದ್ಧ ಜೀವನ ನಡೆಸಬೇಕು. ಬಸವಣ್ಣನವರು `ಲಾಂಛನಕ್ಕೆ ಶರಣೆಂಬೆ, ಲಾಂಛನಕ್ಕೆ ತಕ್ಕ ಆಚರಣೆಯಿಲ್ಲದಿದ್ದಡೆ ಕೂಡಲಸಂಗ ನೀ ಸಾಕ್ಷಿಯಾಗಿ ಛೀ ಎಂಬೆ’ ಎಂದಿದ್ದಾರೆ. ಧರಿಸಿರುವ ಬಟ್ಟೆಗೆ ತಕ್ಕ ವ್ಯಕ್ತಿತ್ವ ಇದ್ದರೆ ಅವರನ್ನು ಗೌರವಿಸಬೇಕು. ಅಂಥ ವ್ಯಕ್ತಿತ್ವ ಇಲ್ಲದಿದ್ದರೆ ಅವರನ್ನು ಗೌರವಿಸದೆ ಛೀಮಾರಿ ಹಾಕಿ ತಿದ್ದುವ ಗುಣ ಭಕ್ತರಲ್ಲಿ ಬರಬೇಕಾಗುತ್ತದೆ. ಅವರು ತಿದ್ದಲಾಗದಷ್ಟು ದಿಕ್ಕು ತಪ್ಪಿದ್ದರೆ ಅಂಥ ಸ್ವಾಮಿಗಳನ್ನು ಆ ಸ್ಥಾನದಿಂದಲೇ ಬಿಟ್ಟುಕಳಿಸುವ ಗಟ್ಟಿತನ ಶಿಷ್ಯರಲ್ಲಿ ಬರಬೇಕಾಗುತ್ತದೆ. ಗುರು, ಶಿಷ್ಯರ ಸಂಬಂಧ ಹೇಗಿರಬೇಕು ಎನ್ನುವುದಕ್ಕೆ ನಮ್ಮ ಗುರುಗಳೇ ಹೇಳುತ್ತಿದ್ದ ಮಾತು: ಭಕ್ತರಿಗಂಜಿ ಗುರು, ಗುರುವಿಗಂಜಿ ಭಕ್ತರು ನಡೆಯಬೇಕು ಎಂದು. ಆಗ ಒಂದು ಮಠ, ಸಮಾಜ ಪ್ರಗತಿ ಕಾಣಲು ಸಾಧ್ಯ. ಅಂದರೆ ಸ್ವಾಮಿಗಳಾದವರು ಭಕ್ತರಿಗೆ ಮತ್ತು ಭಕ್ತರಾದವರು ಸ್ವಾಮಿಗಳಿಗೆ ಅಂಜಿ ನಡೆಯಬೇಕು. ಯಾವಾಗ? ತಪ್ಪು ಮಾಡಿದಾಗ. ಗುರು ತಪ್ಪು ಮಾಡಿದಾಗ ಶಿಷ್ಯರು ಆ ತಪ್ಪನ್ನು ತೋರಿಸಿದರೆ ಆತ ತನ್ನ ಶಿಷ್ಯರಿಗೆ ಅಂಜಿ ನಡೆಯಬೇಕು. ಮುಂದೆ ಆ ಸ್ವಾಮಿ ತಪ್ಪು ಮಾಡದಂತೆ ಎಚ್ಚರದಿಂದ ವರ್ತಿಸಬೇಕು. ಗುರು ತಪ್ಪು ಮಾಡಿದ್ದು ತಿಳಿದುಬಂದಾಗ ಶಿಷ್ಯರಾದವರು ಬಾಯಿಮುಚ್ಚಿಕೊಂಡು ಕೂರಬಾರದು. ತಾವು ಹೋಗುತ್ತಿರುವ ದಾರಿ, ಮಾಡುತ್ತಿರುವ ಕಾರ್ಯ ಸರಿಯಿಲ್ಲ ಎಂದು ನೇರವಾಗಿ ಹೇಳಬೇಕು. ಅದೇ ರೀತಿ ಶಿಷ್ಯರು ತಪ್ಪು ಮಾಡಿದಾಗ ಗುರು ಸಹ ಅವರನ್ನು ಎಚ್ಚರಿಸಿ ತಿದ್ದಬೇಕು. ಬದಲಾಗಿ ಆತ ಶ್ರೀಮಂತ, ಮಠಕ್ಕೆ ಸಾಕಷ್ಟು ದೇಣಿಗೆ ನೀಡಿದ್ದಾನೆ, ದೊಡ್ಡ ಸ್ಥಾನದಲ್ಲಿದ್ದಾನೆ ಎಂದು ಅವನು ತಪ್ಪು ದಾರಿ ತುಳಿದಾಗಲೂ ಎಚ್ಚರಿಸದಿದ್ದರೆ ಆ ಗುರುತ್ವಕ್ಕೆ ಬೆಲೆ ಬರುವುದಿಲ್ಲ. ಆತನ ಅವಗುಣಗಳನ್ನು ಹೇಳಿ ತಿದ್ದಿಕೊಳ್ಳದಿದ್ದರೆ ನಮ್ಮ ಸಂಪರ್ಕದಲ್ಲಿರುವುದು ಬೇಡ ಎಂದು ನೇರವಾಗಿ ಹೇಳಬೇಕು.
`ನ್ಯಾಯನಿಷ್ಠುರಿ ದಾಕ್ಷಿಣ್ಯಪರ ನಾನಲ್ಲ. ಲೋಕವಿರೋಧಿ ಶರಣನಾರಿಗಂಜುವನಲ್ಲ. ಕೂಡಲಸಂಗಮದೇವರ ರಾಜತೇಜದಲ್ಲಿಪ್ಪನಾಗಿ’ ಎನ್ನುವುದು ಬಸವಣ್ಣನವರ ಅಭಿಪ್ರಾಯ. ನ್ಯಾಯ ಮತ್ತು ನಿಷ್ಠುರತೆ ಭಕ್ತರಲ್ಲಿ ಮತ್ತು ಸ್ವಾಮಿಗಳಲ್ಲಿ ಇರಬೇಕು. ಆಗ ಕಲ್ಯಾಣರಾಜ್ಯ ನೆಲೆಗೊಳ್ಳಲು ಸಾಧ್ಯ. ನಮ್ಮಲ್ಲಿ ಇಂದು ಮಠಗಳಿಗೆ ಮತ್ತು ಸ್ವಾಮಿಗಳಿಗೆ ಕೊರತೆ ಇಲ್ಲ. ಆದರೆ ವೈಚಾರಿಕ ಪ್ರಜ್ಞೆಯುಳ್ಳವರಾಗಿ, ಮೌಢ್ಯಗಳನ್ನು ತಿರಸ್ಕರಿಸಿ, ಸಮಸಮಾಜ ನಿರ್ಮಾಣದ ಕಾರ್ಯ ಮಾಡುವ ಸ್ವಾಮಿಗಳು ಎಷ್ಟು ಜನರಿದ್ದಾರೆ? ಸ್ವಾಮಿಗಳು ಸೀಮಿತ ಚೌಕಟ್ಟನ್ನು ಮುರಿದು ಜಾತಿ, ಮತ, ಪಕ್ಷ-ಪಂಗಡ ನೋಡದೆ ಎಲ್ಲ ಜನರೂ ನಮ್ಮವರು ಎನ್ನುವ ಭಾವನೆ ಬೆಳೆಸಿಕೊಳ್ಳಬೇಕು. ಅಪಘಾತವಾದ ವ್ಯಕ್ತಿಗೆ ರಕ್ತ ಬೇಕೆಂದಾಗ ಆತನ ಮತ್ತು ಅವನಿಗೆ ರಕ್ತ ಕೊಡುವವನ ಜಾತಿ ನೋಡುವುದಿಲ್ಲ. ರಕ್ತದ ಗುಂಪನ್ನು ಮಾತ್ರ ಪರಿಗಣಿಸುತ್ತಾರೆ. ಇಲ್ಲಿ ಜಾತಿ ಇಲ್ಲದಿರುವಾಗ ಮಠಗಳು ಜಾತಿಯ ಭಾವನೆಯನ್ನು ಬೆಳೆಸಬಾರದು. ಇವತ್ತು ರಾಜಕೀಯ ಕ್ಷೇತ್ರ ತುಂಬಾ ಕುಲಗೆಟ್ಟು ಹೋಗಿದೆ. ಅದರಂತೆ ಧಾರ್ಮಿಕ ಕ್ಷೇತ್ರವೂ ಕುಲಗೆಟ್ಟರೆ ಗತಿ ಏನು? ಧರ್ಮಗುರುಗಳು ರಾಜಕಾರಣಿಗಳಿಗೆ ಮಾರ್ಗದರ್ಶನ ಮಾಡಬೇಕು. ತಾತ್ವಿಕರು ರಾಜಕೀಯದ ಚುಕ್ಕಾಣಿ ಹಿಡಿಯಬೇಕು ಎನ್ನುವುದು ಗ್ರೀಕ್ ತತ್ವಜ್ಞ ಪ್ಲೇಟೊ ಅವರ ಅಭಿಪ್ರಾಯ. ಇಂದು ಅಂಥ ವಾತಾವರಣವಿಲ್ಲ. ಅಂಥ ತಾತ್ವಿಕರು ಮಠದ ಗುರುಗಳಾದರೂ ಸಮಾಜವನ್ನು ಸರಿದಾರಿಯಲ್ಲಿ ಮುನ್ನಡೆಸಲು ಸಾಧ್ಯ. ಅಂದರೆ ಅವರು ಅಧ್ಯಯನಶೀಲರಾಗಿ, ಸಮಾಜಚಿಂತಕರಾಗಿ, ಅನುಭಾವಿಗಳಾಗಿ ಮಠದ ಮತ್ತು ಭಕ್ತರ ಗೌರವ ಎತ್ತಿಹಿಡಿಯುವಂತೆ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಬಸವಾದಿ ಶರಣರ ತತ್ವಸಿದ್ಧಾಂತದ ಮಾರ್ಗದಲ್ಲಿ ನಡೆಯಬೇಕು. ಹೀಗೆ ಒಂದು ಮಠದ ಸ್ವಾಮಿಯಾದವರ ಮತ್ತು ಅವರ ಶಿಷ್ಯರಾದವರ ಜವಾಬ್ದಾರಿ ಅತ್ಯಂತ ಗುರತರವಾದುದು. ಅಲ್ಲಿ ನಮ್ಮ ಗುರು, ನಮ್ಮ ಶಿಷ್ಯ ಎನ್ನುವ ಅಂದಾಭಿಮಾನವಿರಬಾರದು. ಬದಲಾಗಿ ಗುರು-ಶಿಷ್ಯ ಇಬ್ಬರೂ ಶರಣ ಮಾರ್ಗದಲ್ಲಿ ನಡೆಯುವವರಾಗಬೇಕು. ಆಗಲೇ ಗುರು-ಶಿಷ್ಯ ಸಂಬಂಧಕ್ಕೆ ಗೌರವ ಬರುವುದು.
ವಿಳಾಸ: ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ಶ್ರೀ ತರಳಬಾಳು ಜಗದ್ಗುರು ಶಾಖಾಮಠ
ಸಾಣೇಹಳ್ಳಿ- 577 515
ಹೊಸದುರ್ಗ-ತಾ, ಚಿತ್ರದುರ್ಗ-ಜಿ
Ph: 94483 95594, email: swamiji.ps@gmail.com
ಮನಸ್ಸಿಗೆ ಬಂದ ಬಯಕೆ, ಬಯಕೆಗೆ ತಕ್ಕ ಪೂರೈಕೆ, ಬೇಡಿದ್ದನ್ನು ನೀಡುವ ಕಲ್ಪತರು-ಕಾಮಧೇನು, ಕಣ್ಣೀರು-ಬೆವರುಗಳಿಲ್ಲದ ಆನಂದ, ಅಪರಿಮಿತವಾದ ಆಯಸ್ಸು, ತಿಂದು ತೇಗುವಷ್ಟು ತಿನಿಸು, ಅಪ್ಪಿಕೊಳ್ಳುವಷ್ಟು ಅಪ್ಸರೆಯರು, ಹೊತ್ತಿನ ಗೊತ್ತಿಲ್ಲ. ಕತ್ತಲೆಯ ಕಾಟವಿಲ್ಲ. ರೋಗವಿಲ್ಲದ ಯೋಗ, ಸೋಲಿಲ್ಲದ ಭೋಗ. ಅಲ್ಲಿ ಸೂರ್ಯ ತಂಪು; ಚಂದ್ರ ಬೆಚ್ಚಗೆ - ಹೀಗೆ ಸ್ವರ್ಗಸುಖದ ಬಗೆಗೆ ಏನೇನೋ ವರ್ಣಿಸಿದ್ದಾರೆ ನಮ್ಮ ಪೌರಾಣಿಕರು. ಎಂದಿನಿಂದಲೂ ಸುಖಾಪೇಕ್ಷಿಯಾದ ಮಾನವನನ್ನು ಕೇಳಬೇಕೆ? ಆ ವರ್ಣನೆಯನ್ನು ಕೇಳಿ ಹುಚ್ಚನಾದ!
ಆದರೆ, ಅದೆಲ್ಲ ಸತ್ತನಂತರ ದೊರೆಯುವ ಸುಖವಾಗಿತ್ತು. ಸಾಯುವವರೆಗೆ ಕಾಯುವುದಾದರೂ ಹೇಗೆ? ಅಥವಾ ಆ ಸ್ವರ್ಗದ ಆಸೆಗಾಗಿ ಬೇಗ ಸಾಯುವುದೆ? ಬಹಳ ಯೋಚನೆ ಮಾಡಿದ, ಮಾನವ. ಬುದ್ಧಿಜೀವಿಯಲ್ಲವೇ ಅವನು? ಸತ್ತನಂತರ ಸಿಗಬಹುದಾದ ಸ್ವರ್ಗಸುಖವನ್ನು ಭೂಮಿಯ ಮೇಲೆಯೇ ಅನುಭವಿಸಬಾರದೇಕೆ ಎಂದು ಅನಿಸಿತು. ಅಂತೇ, ಯಾವ ನೋವೂ ಇಲ್ಲದ, ಯಾವ ದುಃಖವೂ ಇಲ್ಲದ ಹರ್ಷೋದ್ಯಾನವನ್ನು ತಾನಿರುವಲ್ಲಿಯೇ ಸೃಷ್ಟಿಸಿದ.
ನಮಗೆಲ್ಲ ತಿಳಿದಿರುವಂತೆ, ಆದಿಮಾನವನ ಜೀವನ ಬೆತ್ತಲೆ ಮತ್ತು ಕೊರತೆಗಳ ಆಗರ. ತನ್ನ ಉಳಿವಿಕೆಗಾಗಿ, ತನ್ನ ಕೊರತೆಗಳ ಪೂರೈಕೆಗಾಗಿ, ಅವನು ಪ್ರಚಂಡ ಹೋರಾಟ ನಡೆಸುತ್ತಲೇ, ಈ ಭೂಮಿಯ ಮೇಲೆ ತನ್ನ ಬದುಕನ್ನು ಆರಂಭಿಸಿದ. ಆದರೂ, ಶ್ರಮವಿಲ್ಲದೆ ಸಮೃದ್ಧವಾಗಿ ದೊರೆಯಬಹುದಾದ ಸ್ವರ್ಗಸುಖದ ಕನಸಿನ ಬೆನ್ನು ಹತ್ತಿಕೊಂಡೇ ಬಂದ. ತಾನು ಬಿತ್ತದ ಕಡೆ ಕೊಯ್ಯುವ ಪ್ರಯತ್ನ ಮಾಡುತ್ತಲೇ ಬಂದ.
ಮಾನವ ಯಾವಾಗಲೂ ದೈಹಿಕ ಶ್ರಮವನ್ನು ತಪ್ಪಿಸಿಕೊಳ್ಳಲು, ಕೇವಲ ಸುಖವನ್ನು ಅನುಭವಿಸಲು, ತನ್ನ ಬುದ್ಧಿಯನ್ನೆಲ್ಲಾ ಬಳಸಿದ್ದಾನೆ. ಬುದ್ಧಿಯ ಕಸರತ್ತು ಎಷ್ಟಾದರೂ ಆಗಲಿ, ಸುಖ ದೊರೆತರೆ ಸಾಕು. ಒಂದು ವೇಳೆ, ಆ ಸುಖದ ಸಂಪಾದನೆಗೆ ಬೆವರು-ಕಣ್ಣೀರುಗಳು ಅಗತ್ಯವೆನಿಸಿದರೆ, ಅವು ತನ್ನವೇ ಆಗಬೇಕೆಂದೇನಿಲ್ಲ; ತನ್ನ ಸುಖಕ್ಕಾಗಿ ಅನ್ಯರು ಬೆವರು-ಕಣ್ಣೀರು ಹರಿಸಿದರೂ ಆದೀತು. ಅದರಿಂದ ದೊರೆಯುವ ಫಲ ತನ್ನದಾದರೆ ಸರಿ.
ಸುಖಾಪೇಕ್ಷೆಯ ಈಡೇರಿಕೆಗೆ ಮಾನವ ತನ್ನ ಬುದ್ಧಿಯನ್ನು ಬಳಸಿ, ಶ್ರಮದ ಹೊರತಾಗಿ ಏನನ್ನಾದರೂ ಮಾಡಲು ಸಿದ್ಧನಿರುತ್ತಾನೆ. ಶ್ರಮಕ್ಕೆ ಬೇಕಾಗುವುದು ಸುಬುದ್ಧಿ. ಉಳಿದುದಕ್ಕೆ ಬೇಕಾದದ್ದು ಉಪಾಯ; ಕುಬುದ್ಧಿ. ಆ ಕುಬುದ್ಧಿಯ ಫಲವಾಗಿ ಸೃಷ್ಟಿಯಾದುದೇ ಗುಲಾಮಗಿರಿ; ಊಳಿಗತನ. ಅದರಿಂದ ಒಬ್ಬರು ಅಥವಾ ಕೆಲವರ ಸುಖಕ್ಕಾಗಿ, ಅನೇಕರು ಬೆವರು ಹರಿಸಿ ದುಡಿದು ಮಡಿಯಬೇಕಾಯಿತು. ಬಹುತೇಕ ಪುರಾತನವೆನ್ನುವ ಎಲ್ಲ ನಾಗರಿಕತೆಗಳೂ ಈ ಗುಲಾಮಗಿರಿಯನ್ನೇ ಆಧರಿಸಿವೆ. ಗುಲಾಮರು ರೊಚ್ಚಿಗೆದ್ದಕೂಡಲೇ ಆ ಮೇಲ್ವರ್ಗದ ಸುಖಾಪೇಕ್ಷಿಗಳ ವೈಭವ-ವಿಲಾಸಗಳು ಶಿಥಿಲಗೊಂಡು, ಅಂತಹ ನಾಗರಿಕತೆಗಳು ನಿರ್ನಾಮಗೊಂಡಿವೆ. ಮಧ್ಯಯುಗದಲ್ಲಿ ಆ ಗುಲಾಮಗಿರಿಯ ಸ್ಥಾನದಲ್ಲಿ, ಬದಲಾವಣೆಯಾದ ಕಾಲಕ್ಕೆ ಹೊಂದಿಕೊಂಡ ಜೀತಗಾರಿಕೆ ಬಂದಿತು. ಆಧುನಿಕ ಕಾಲದಲ್ಲಿ ಅದೂ ಹೋಗಿ, ಆ ಸ್ಥಳವನ್ನು ಬಂಡವಾಳಶಾಹಿ ವರ್ಗಕ್ಕಾಗಿ ಸಂಬಳಕ್ಕೆ ದುಡಿಯುವ ಶ್ರಮಜೀವಿ ಕಾರ್ಮಿಕರು ತುಂಬಿದ್ದಾರೆ.
ಈ ಎಲ್ಲ ಕಾಲಮಾನಗಳಲ್ಲೂ ಮಾನವನ ದೈಹಿಕಶ್ರಮ ಅತ್ಯಂತ ಅಗತ್ಯವೆಂದಿದ್ದರೂ, ಅದು ಕಷ್ಟದಾಯಕವೆಂದೇ ಪರಿಗಣಿಸಲ್ಪಟ್ಟಿದೆ. ಕೇವಲ ಜೀವನ ವ್ಯವಹಾರಸಾಧ್ಯತೆಗಾಗಿ ಅನಿವಾರ್ಯವೆಂಬಂತೆ ಅದನ್ನು ನಿರ್ವಹಿಸಲಾಗಿದೆ. ಭಾರತದಲ್ಲಿ ನಡೆದ ಒಂದು ಚಮತ್ಕಾರದ ತಂತ್ರವೆಂದರೆ, ಒಂದು ವರ್ಗದ ಜನ, ವರ್ಣಗಳ ಆಧಾರದ ಮೇಲೆ, ಒಂದು ವಿಚಿತ್ರ ಸಾಮಾಜಿಕ ವ್ಯವಸ್ಥೆಯನ್ನು ಹುಟ್ಟುಹಾಕಿದ್ದು. ಆ ವ್ಯವಸ್ಥೆಯ ಆರಂಭದಲ್ಲಿ, ಬ್ರಾಹ್ಮಣ ಮತ್ತು ಕ್ಷತ್ರಿಯ ಎಂಬ ಎರಡು ವರ್ಣಗಳು ಮಾತ್ರ ಇದ್ದವು. ಕ್ರಮೇಣ, ಆ ಎರಡರ ಅನುಕೂಲಕ್ಕಾಗಿ, ವೈಶ್ಯ ಮತ್ತು ಶೂದ್ರ ವರ್ಣಗಳು ಸೇರ್ಪಡೆಯಾದವು. ಕಾಲ ಕಳೆದಂತೆ, ಆ ನಾಲ್ಕು ವರ್ಣಗಳು ವೃತ್ತಿ ಮತ್ತು ವಾಡಿಕೆಗಳನ್ನು ಆಧರಿಸಿ, ನಾಲ್ಕು ಸಾವಿರ ಜಾತಿಗಳೇ ಆದವು.
ಇತಿಹಾಸದ ಈ ಅವಧಿಯಲ್ಲಿ ವೃತ್ತಿವಾಡಿಕೆಗಳು ಜಾತಿಭ್ರಾಂತಿ ಮೂಲವಾದ ವಿಲಕ್ಷಣ ಪರಂಪರೆಗೆ ಕಾರಣವಾದವು. ಧಾರ್ಮಿಕ ಕಾರ್ಯಗಳನ್ನು ಮಾಡುವುದು ಉನ್ನತ ಜಾತಿ ಎನಿಸಿತು. ದೈಹಿಕ ಶ್ರಮದ ಕೆಲಸ ಮಾಡುವುದು ಕೀಳು ಜಾತಿ ಎನಿಸಿತು. ನಾಲ್ಕು ಸಾವಿರ ಮೆಟ್ಟಿಲುಗಳ ಆ ಸಾಮಾಜಿಕ ಏಣಿಗೆ, ಭಂಗಿ ಬುಡದ ಮೆಟ್ಟಿಲಾದ. ಒಬ್ಬರ ಹೆಗಲ ಮೇಲೆ ಒಬ್ಬರು ನಿಂತು, ಏಣಿಯ ತುತ್ತತುದಿಯಲ್ಲಿ ಬ್ರಾಹ್ಮಣ ನಿಂತ. ತಾನು ಮಾಡುವ ಸ್ವಸ್ತಿ ವಾಚನಕ್ಕೆ ಬದಲಾಗಿ, ಬ್ರಾಹ್ಮಣ ಎಲ್ಲ ಭೋಗವಸ್ತುಗಳನ್ನೂ ಪಡೆಯತೊಡಗಿದ. ಭಂಗಿ ಕಸ ಗುಡಿಸಬೇಕಾಗಿ ಬಂದು ಅಸ್ಪೃಶ್ಯನಾದ. ದುಡಿಮೆಯ ದುರಂತವಾದದ್ದೇ ಇಲ್ಲಿ; ವರ್ಗಭೇದದ ಸುಳಿದೆಗೆದದ್ದೇ ಇಲ್ಲಿ.
ಈ ಶ್ರೇಷ್ಠ-ಕನಿಷ್ಠಗಳ ಸಮರ್ಥನೆಗೆ ಬ್ರಾಹ್ಮಣರು ಬಳಸಿಕೊಂಡ ಪ್ರಧಾನ ಅಸ್ತçವೆಂದರೆ, ದೇವರು ಮತ್ತು ಧರ್ಮ. ಅವುಗಳ ಹೆಸರಿನಲ್ಲಿ ನಡೆಸುವ ಪೂಜೆ-ಪೌರೋಹಿತ್ಯಗಳು ‘ಲೋಕಕಲ್ಯಾಣಾರ್ಥ’ ಎಂಬ ರೂಪವನ್ನು ಪಡೆದವು. ಆ ಪೂಜೆ-ಪೌರೋಹಿತ್ಯಗಳಿಗೆ ಬೇಕಾದ ಸಾಮಗ್ರಿ ಒದಗಿಸುವ ಶ್ರಮಜೀವಿಗೆ ಅಲ್ಲಿ ಯಾವ ಅವಕಾಶವೂ ಇರಲಿಲ್ಲ. ಆ ಅನಿಷ್ಟ ಅತ್ಯಂತ ಆಳವಾಗಿ ಬೇರುಬಿಟ್ಟುಕೊಂಡಿತು. ಏಕೆಂದರೆ, ಅದು ಅಂದಿನ ಧರ್ಮ ಮತ್ತು ಸಂಪ್ರದಾಯಗಳ ಅಂಗೀಕಾರ ಪಡೆದಿತ್ತು. ಸನಾತನಿಗಳು ಹುಟ್ಟುಹಾಕಿದ ಈ ಅನಿಷ್ಟಗಳಿಗೆ ಆಧಾರವೆಂಬಂತೆ, ಕಾಲ ಕಾಲಕ್ಕೆ ಧರ್ಮಗ್ರಂಥಗಳು ಮತ್ತು ಶಾಸ್ತ್ರ-ಪುರಾಣಗಳು ಸೃಷ್ಟಿಯಾದವು. ಜನರ ಬದುಕಿನ ಸಮಸ್ತಕ್ಕೂ ಆ ಶಾಸ್ತç-ಪುರಾಣಗ್ರಂಥಗಳೇ ಪ್ರಮಾಣವಾದವು.
ಸೂಕ್ಷ್ಮಮತಿಯಾದ ಬಸವಣ್ಣನವರು ಪ್ರಾಚೀನವೆನ್ನುವ ಈ ಗ್ರಂಥಗಳನ್ನೆಲ್ಲ ಅಧ್ಯಯನ ಮಾಡಿ, ಅವುಗಳಲ್ಲಿರುವ ಅಮಾನವೀಯತೆ, ಅಸಮಾನತೆ ಮತ್ತು ಅರ್ಥಹೀನತೆಗಳನ್ನೆಲ್ಲ ಕಂಡುಕೊಂಡರು. ಮಾನವ ಸಮುದಾಯದಲ್ಲಿ ಜಾಗೃತಿ ಮೂಡಿಸದ ಹೊರತು, ಆ ಅನಿಷ್ಟ ಪದ್ಧತಿಗಳನ್ನು ನಿವಾರಿಸದ ಹೊರತು, ಮಾನವ-ಮಾನವರಲ್ಲಿ ಸಂಬಂಧ-ಸಮಾನತೆಗಳನ್ನು ಸಾಧಿಸಲು ಸಾಧ್ಯವಿಲ್ಲವೆಂದು ತಿಳಿದು, ಸಮಾನ ಮನಸ್ಕರೊಡನೆ ಸಮಾಲೋಚನೆ ನಡೆಸಿ, ಸಾಮೂಹಿಕ ಆಂದೋಲನವೊಂದರ ಅಗತ್ಯದ ಬಗೆಗೆ ಅವರಿಗೆಲ್ಲ ಮನವರಿಕೆ ಮಾಡಿಕೊಟ್ಟರು. ಇತಿಹಾಸದಲ್ಲೇ ಮೊದಲ ಬಾರಿಗೆ, ಬಸವಣ್ಣನವರ ನಾಯಕತ್ವದಲ್ಲೇ ನಡೆದ ಅಂದಿನ ಲೋಕಸೋಜಿಗದ ಆಂದೋಲನಕ್ಕೆ ಮಾಧ್ಯಮವಾದದ್ದೆಂದರೆ, ಶರಣರೇ ರಚಿಸಿದ ವಚನ ಸಾಹಿತ್ಯ.
ಬಸವಾದಿ ಶರಣರು ತಮ್ಮ ವಿಚಾರಧಾರೆಯಿಂದ ಜನಸಮುದಾಯದಲ್ಲಿ ಉಂಟುಮಾಡಿದ ಜಾಗೃತಿ ಮತ್ತು ಪರಿವರ್ತನೆಯು, ಅಂದಿನ ಸಂಪ್ರದಾಯವಾದಿಗಳಲ್ಲಿ ನಡುಕ ಹುಟ್ಟಿಸಿ, ಅವರು ಆ ಆಂದೋಲನವನ್ನು ಅಡಗಿಸಲು ರಾಜಶಾಹಿಯೊಡನೆ ನಡೆಸಿದ ಒಳಸಂಚು, ಆಂದೋಲನದ ಅಂತಃಶಕ್ತಿಯಾಗಿದ್ದ ವಚನ ಸಾಹಿತ್ಯವನ್ನು ನಾಶಪಡಿಸಲು ನಡೆಸಿದ ಪ್ರಯತ್ನ, ಚಾಡಿಮಾತುಗಳಿಂದ ಅಂದಿನ ಆಳ್ವಿಕೆಯಿಂದ ಶರಣರು ಅನುಭವಿಸಿದ ಹಿಂಸೆ, ಆಗ ನಡೆದ ದುರಂತ ಘಟನೆಗಳು, ಅಳಿದುಳಿದ ವಚನ ಸಾಹಿತ್ಯದ ಸಂರಕ್ಷಣೆಗಾಗಿ ಶರಣರು ಕಲ್ಯಾಣವನ್ನು ಬಿಟ್ಟು ಚದುರಿ ಹೋದದ್ದು, ಅನಂತರ ವೈದಿಕ ಹಿನ್ನೆಲೆಯ ಸನಾತನಿಗಳು ಮತ್ತೆ ತಲೆ ಎತ್ತಿದ್ದು, ಶರಣರು ಸಾರಿದ ಲಿಂಗಾಯತ ಸಿದ್ಧಾಂತಗಳೆಲ್ಲ, ಬಸವ ಪೂರ್ವದಲ್ಲೇ ಇದ್ದ ವೀರಶೈವ ಸಿದ್ಧಾಂತಗಳೇ ಆಗಿವೆ ಎಂದು ಸಾರತೊಡಗಿದ್ದು, ಮಠವ್ಯವಸ್ಥೆಯಲ್ಲಿ ಗುರು-ವಿರಕ್ತ ಭೇದ ಮೂಡಿಸಿದ್ದು, ವಚನ ಸಾಹಿತ್ಯವನ್ನು ಪ್ರಕ್ಷಿಪ್ತಗೊಳಿಸಿದ್ದು, ವೈಚಾರಿಕ ಲಿಂಗಾಯತ ಧರ್ಮದ ನಿಲುವಿಗೆ ವಿರುದ್ಧವಾಗಿ, ವೀರಶೈವರು ತಾವು ಹಿಂದೂ ಧರ್ಮದ ಭಾಗವೆಂದು ಘೋಷಿಸಿದ್ದು - ಇತ್ಯಾದಿ ಬೆಳವಣಿಗೆಗಳನ್ನೆಲ್ಲ ಇತಿಹಾಸಕಾರರು ದಾಖಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಈಗ ಅತ್ಯಂತ ತ್ವರಿತವಾಗಿ ಮತ್ತು ವ್ಯವಸ್ಥಿತವಾಗಿ ನಡೆಯಬೇಕಾದುದೆಂದರೆ, ಲಿಂಗಾಯತರ ಸಂಘಟನೆ. ಇದು ಉಳಿದ ಸಂಘಟನೆಗಳಂತಾಗದೆ, ಸಮರ್ಪಣ ಭಾವದ ಮತ್ತು ಸಮಷ್ಟಿಹಿತಚಿಂತನೆಯ ಒಂದು ಶಿಸ್ತಿನ ಸಂಘಟನೆಯಾಗಬೇಕು. ಯಾರು ಲಿಂಗಾಯತ ಧರ್ಮದ ತತ್ವಗಳಿಗೆ ಬದ್ಧರಾಗಿರಲು ಒಪ್ಪುತ್ತಾರೋ, ಅವರನ್ನೆಲ್ಲ ಜಾಗತಿಕ ಲಿಂಗಾಯತ ಮಹಾಸಭಾ ಸ್ವಾಗತಿಸುತ್ತದೆ. ಹಿಂದೂ ಸಂಪ್ರದಾಯದ ಹಳೆಯ ಮರವನ್ನೇ ಅಪ್ಪಿಕೊಂಡವರು ಒಪ್ಪದಿರಬಹುದು. ಅಂತಹವರ ಬಗೆಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ‘ಕಾಯಾ-ವಾಚಾ-ಮನಸಾ’ ಯಾರು ಈ ಧರ್ಮಕ್ಕೆ ಬದ್ಧರೋ ಅವರೇ ಉಳಿದುಕೊಳ್ಳಲಿ. ಹೇಗೂ ನಾವು ಅಲ್ಪಸಂಖ್ಯಾತರು. ಆದರೂ ಬೌದ್ಧ, ಜೈನ, ಸಿಖ್ ಬಂಧುಗಳಂತೆ ನಾವು ತತ್ವಬದ್ಧರಾಗಬೇಕು. ನಾವು ಈಗ ಸಂಘಟನೆಯಲ್ಲಿ ಯಶಸ್ವಿಯಾದರೆ, ವಿಶ್ವಸೋಜಿಗದ ಸಮಾಜೋ-ಧಾರ್ಮಿಕ ಆಂದೋಲನ ನಡೆಸಿದ ಬಸವಾದಿ ಶರಣರಿಗೆ ನಾವು ಸಲ್ಲಿಸುವ ಗೌರವವಾಗುತ್ತದೆ. ನಾವು ಸ್ವತಂತ್ರರಾಗೇ ಉಳಿಯುತ್ತೇವೆ.
‘ಲಿಂಗಾಯತ’ 12ನೆಯ ಶತಮಾನದ ಕಾಯಕ ಜೀವಿಗಳೆನಿಸಿದ ಬಸವಾದಿ ಶರಣರು ರೂಪಿಸಿದ ಕರ್ನಾಟಕದ ಪ್ರಥಮ ಸ್ವತಂತ್ರಧರ್ಮ. ವಚನಗಳಲ್ಲಿ ಇದನ್ನು ‘ಲಿಂಗವಂತ’ ಎಂದು ವಿಶೇಷವಾಗಿ ಉಲ್ಲೇಖಿಸಲಾಗಿದೆ. ಲಿಂಗಾಯತ, ಲಿಂಗಸ್ವಾಯತ, ಲಿಂಗಸನ್ನಿಹಿತ ಎಂಬವು ಲಿಂಗಕ್ಕೆ ಸಂಬಂಧಿಸಿದ ಮೂರು ಕ್ರಿಯೆಗಳು. ಗುರುವಿನಿಂದ ಇಷ್ಟಲಿಂಗವನ್ನು ಪಡೆಯುವುದು. ‘ಲಿಂಗಾಯತ’; ನಿಷ್ಠೆಯಿಂದ ಆ ಇಷ್ಟಲಿಂಗವನ್ನು ಪೂಜಿಸಿ ಲಿಂಗಗುಣಗಳನ್ನು ತನ್ನಲ್ಲಿ ಅಳವಡಿಸಿಕೊಳ್ಳುವುದು ‘ಲಿಂಗಸ್ವಾಯತ’; ತಾನು ಬೇರೆ-ಲಿಂಗ ಬೇರೆಯೆಂಬ ಭಾವವಳಿದು ಲಿಂಗವೇ ತಾನಾಗಿ ನಿಲ್ಲುವುದು ‘ಲಿಂಗ ಸನ್ನಿಹಿತ’.* ಈ ಮೂರು ಕ್ರಿಯೆಗಳನ್ನು ಅಳವಡಿಸಿಕೊಂಡವನೇ ಲಿಂಗವಂತ. ಈ ಲಿಂಗವಂತನು ಅನುಸರಿಸುವ ಧರ್ಮವೇ ‘ಲಿಂಗವಂತ ಧರ್ಮ’. ಅದೇ ಬಸವಾದಿ ಶರಣರು ರೂಪಸಿದ ಸ್ವತಂತ್ರಧರ್ಮ.
ಲಿಂಗಾಯತ’ ಎನ್ನುವ ಪದ ಬಸವಯುಗದ 22 ಶರಣರ 101 ವಚನಗಳಲ್ಲಿ ಬಳಕೆಯಾಗಿದೆ. ಅವುಗಳಲ್ಲಿ ಲಿಂಗವಂತನ ಸ್ವರೂಪ, ಲಕ್ಷಣ, ಲಿಂಗಾಯತ ಧರ್ಮದ ತತ್ವ-ಸಿದ್ಧಾಂತ-ಆಚರಣೆಗಳಿಗೆ ಸಂಬಂಧಿಸಿದ ಅನೇಕ ವಿಷಯಗಳು ಬಿಡಿಬಿಡಿಯಾಗಿ ನಿರೂಪಿತವಾಗಿವೆ.
ಬಸವಣ್ಣನವರ 5 ವಚನಗಳಲ್ಲಿ ಲಿಂಗವಂತಪದ ಬಳಕೆಯಾಗಿದ್ದು, ಅವುಗಳಲ್ಲಿ ಲಿಂಗವಂತನ ಇಷ್ಟಲಿಂಗ ನಿಷ್ಠೆ, ನಡೆನುಡಿ ಶುದ್ಧಿ, ಅವನ ಸಂಗದಿAದಾಗುವ ಲಾಭ ಕುರಿತು ತಿಳಿಸಲಾಗಿದೆ.
ಲಿಂಗವಿದ್ದಲ್ಲಿ ನಿಂದೆ ಇರದು, ನಿಂದೆಯಿದ್ದಲ್ಲಿ ಲಿಂಗವಿರದು
ಅವರೆಂತಿದ್ದರೇನು? ಹೇಗಿದ್ದರೇನು? ಲಿಂಗಂತರವರು.
ಉಪಮಿಸಬಾರದ ಮಹಾಘನವು
ಕೂಡಲಸಂಗನ ಶರಣರು.
ಎಂದು ಲಿಂಗವಂತ ಶರಣರ ನಿಜದ ನಿಲವನ್ನು ಹೇಳಿದರೆ, ಕೆಳಗಿನ ವಚನದಲ್ಲಿ ನಡೆ ನುಡಿ ಶುದ್ಧಿಯುಳ್ಳ ಲಿಂಗವಂತನಿಗೆ ಯಾವುದೇ ಭಯವಿಲ್ಲ. ಕೂಡಲಸಂಗಮದೇವ ಅವರ ಅಭಿಮಾನ ತನ್ನದೆಂದು ಕಾಯುತ್ತಾನೆ ಎಂದು ತಿಳಿಸಲಾಗಿದೆ.
ಲಿಂಗವಶದಿಂದ ಬಂದ ನಡೆಗಳು
ಲಿಂಗವಶದಿಂದ ಬಂದ ನುಡಿಗಳು
ಲಿಂಗವಂತರು ತಾವು ಅಂಜಲದೇಕೆ?
ಕೂಡಲಸಂಗಮದೇವ
ಭಕ್ತರಭಿಮಾನ ತನ್ನದೆಂಬನಾಗಿ.
ಇನ್ನೊಂದು ವಚನದಲ್ಲಿ ಲಿಂಗವಂತನ ಸಂಗದಿಂದಾಗುವ ಪ್ರಯೋಜನ ಕುರಿತು ವರ್ಣಿಸಲಾಗಿದೆ.
ಗಿರಿಗಳ ಮೇಲೆ ಹಲವು ತರುಮರಾದಿಗಳಿದ್ದು
ಶ್ರೀಗಂಧದ ಸನ್ನಿಧಿಯಲ್ಲಿ ಪರಿಮಳವಾಗವೆ ?
ಲಿಂಗವಂತನ ಸನ್ನಿಧಿಯಿಂದ
ಹಿಂದಣ ದುಸ್ಸಂಗವು ಕೆಡುವುದು
ಕೂಡಲಸಂಗಮದೇವಯ್ಯಾ
ಸಿರಿಯಾಳನ ಸಾರಿರ್ದ ನರರೆಲ್ಲ ಸುರರಾಗರೆ?
ಪ್ರಭುದೇವರು - ಶ್ರೀಗುರು ಅರಿಯಬಾರದ ಲಿಂಗವನ್ನು ಅರಿವಂತೆ ಮಾಡಿಕೊಟ್ಟ ಲಿಂಗವನ್ನು ಲಿಂಗವಂತರು ಹೇಗೆ ಪೂಜಿಸಬೇಕು ಎಂಬ ರೀತಿಯನ್ನು, ಲಿಂಗವಂತರು ಶಾಸ್ತ್ರಂಗಳು ಹೇಳುವ ಉಪವಾಸ ಇತ್ಯಾದಿ ವ್ರತಗಳನ್ನು ಅನುಸರಿಸುವವರಲ್ಲ ಎಂಬುದನ್ನು, ಲಿಂಗವಂತನ ನಡೆ-ನುಡಿ ಚಾರಿತ್ರವನ್ನು ನಿಂದಿಸುವವರಿಗೆ ಒದಗುವ ತೊಂದರೆಯನ್ನು ಕುರಿತು ಹೇಳುತ್ತಾರೆ.
‘ಉಣಲಾಗದೆಂಬ ಶಾಸ್ತ್ರವಿಡಿದು ಇದ್ದವನಲ್ಲ;
ಉಣಲಾಗದೆಂಬ ಶಾಸ್ತ್ರವುಂಟೆ ಲಿಂಗವಂತಂಗೆ?’
`ಲಿಂಗವಂತನ ನಡೆನುಡಿ ಚಾರಿತ್ರ ನಿಂದಕವನಾಡಿದಡೆ
ಆ ಲಿಂಗ ನಿಮ್ಮ ಹಲ್ಲಕಳೆವ, ಆ ಲಿಂಗ ನಿಮ್ಮ ನರಕಕ್ಕಿಕ್ಕುವ’
ಚೆನ್ನಬಸವಣ್ಣ ಸು. 20 ವಚನಗಳಲ್ಲಿ ಲಿಂಗವಂತ ಪದ ಬಳಸಿದ್ದು, ಲಿಂಗವಂತನ ಸದಾಚಾರಸಂಪನ್ನತೆಯನ್ನು ಕುರಿತು ಮನದುಂಬಿ ಹೊಗಳುತ್ತಾನೆ.
‘ಉದಯಮುಖದಲ್ಲಿ ಲಿಂಗದರುಶನ
ಹಗಲಿನ ಮುಖದಲ್ಲಿ ಜಂಗಮದರುಶನ
ಲೇಸು ಲೇಸು, ಲಿಂಗವಂತಂಗೆ ಇದೇ ಪಥವು’
‘ಲಿಂಗಸಾರಾಯ ಸುಖಸಂಗಿಗಳನುಭಾವ
ಲಿಂಗವಂತಗಲ್ಲದೆ ಕಾಣಬಾರದು’
‘ಕರಸ್ಥಲದಲ್ಲಿ ಲಿಂಗವಧರಿಸಿ ಅನ್ಯಲಿಂಗಕ್ಕೆ ತಲೆಬಾಗದಾತನ
ಲಿಂಗವಂತನೆಂಬೆನಯ್ಯಾ.
ಕರಸ್ಥಲದಲ್ಲಿ ಲಿಂಗವಧರಿಸಿ ಭವಿಸಂಗವಮಾಡದಾತನ
ಲಿಂಗವಂತನೆಂಬೆನಯ್ಯಾ.’
ಹೀಗೆಯೇ ಸಿದ್ಧರಾಮ ‘ಲಿಂಗಾಯತಂ ಭೋ ಸ್ವತಂತ್ರಶೀಲ’ ಎಂದೂ, ‘ಲಿಂಗವಂತರು ತಾವಾದಬಳಿಕ ಅಂಗನೆಯರ ನಡೆನುಡಿಗೊಮ್ಮೆ ಲಿಂಗದ ರಾಣಿಯರೆಂದು ಭಾವಿಸಬೇಕು’ ‘ಲಿಂಗವಂತರು ತಾವಾದಬಳಿಕ ಅನುಭವ ವಚನಗಳ ಹಾಡಿ ಸುಖ ದುಃಖಗಳಿಗಭೇದ್ಯವಾಗಿರಬೇಕು’ ಎಂದು ಹೇಳುತ್ತಾನೆ.
ಅಮುಗೆರಾಯಮ್ಮ ‘ಅಂಗದ ಮೇಲೆ ಲಿಂಗವುಳ್ಳ ಲಿಂಗವಂತರಲ್ಲಿ ಲಿಂಗಾರ್ಪಿತವ ಬಿಡಲೇಕೆ?’ ಎಂದು ಕೇಳುತ್ತಾಳೆ. ಕೇತಲದೇವಿ ‘ಲಿಂಗವಂತರ ಲಿಂಗಾಚಾರಿಗಳ ಅಂಗಳಕ್ಕೆ ಹೋಗಿ ಲಿಂಗಾರ್ಪಿತವ ಮಾಡುವಲ್ಲಿ ಸಂದೇಹವಿಲ್ಲದಿರಬೇಕು’ ಎಂದು ಹೇಳುತ್ತಾಳೆ.
ಉರಿಲಿಂಗಪೆದ್ದಿಯಂತೂ ಸು.24 ವಚನಗಳಲ್ಲಿ ‘ಲಿಂಗವಂತ’ ಪದವನ್ನು ವಿವಿಧ ನೆಲೆಯಲ್ಲಿ ಬಳಸಿದ್ದಾನೆ. ‘ಲಿಂಗವಂತನು ಮುಟ್ಟಿತ್ತೆ ಅರ್ಪಿತ, ಕೊಂಡುದೆ ಪ್ರಸಾದ’ ‘ಲಿಂಗವಂತರು ಲಿಂಗವನೇ ಚಿಂತಿಸುವುದು, ಲಿಂಗವನೆ ಆಸೆಗೈವುದು, ಲಿಂಗವನೇ ಕೊಂಬುದು’ ‘ಲಿಂಗವನರಿದ ಲಿಂಗವಂತರು ಸರ್ವಾಂಗಲಿಂಗಮೂರ್ತಿ. ಆತ ನುಡಿದುದೇ ವೇದ, ಆತನ ನಡೆಯೇ ಶಾಸ್ತ್ರ, ಪುರಾಣ ಆಗಮ ಚರಿತ್ರವು ಲಿಂಗವಂತರ ಕ್ರೀಯೆಲ್ಲವೂ ಲಿಂಗಕ್ರೀ’.
ಮಡಿವಾಳ ಮಾಚಯ್ಯ ‘ಲಿಂಗವಂತಂಗೆ ಸೂತಕವೆಂಬ ನುಡಿಯ ಕೇಳಲಾಗದು’ ‘ನಾವು ಲಿಂಗವಂತರೆಂದು ನುಡಿವರು ಮತ್ತೆ ಮರಳಿ ಭವಿ ಶೈವಂಗಳಿಗೆರಗುವ ಈ ಮಂಗಮಾನವರನೇನೆಂಬೆನಯ್ಯಾ’ ಎಂದು ಬಯ್ಯುತ್ತಾನೆ. ಮರಳುಶಂಕರದೇವ ‘ನಿಮ್ಮ ಲಿಂಗವಂತನ ನಿಲವಿನ ಪರಿಯ ನೀವೆ ಬಲ್ಲಿರಲ್ಲದೆ ನಾನೆತ್ತಬಲ್ಲೆನಯ್ಯಾ?’ ಎಂದರೆ, ಸಕಳೇಶ ಮಾದರಸ ‘ಪಂಚ ಮಹಾಶೈವರು ಭ್ರಷ್ಟರಾಗಿ ಹೋದರು ಎಂತು ಲಿಂಗವಂತಂಗೆ ಸರಿಯೆಂಬೆ?’ ಎಂದು ಪ್ರಶ್ನಿಸುತ್ತಾನೆ.
ಹೀಗೇ ಇನ್ನುಳಿದ ವಚನಕಾರರು ಲಿಂಗವಂತನ ವಿಶೇಷತೆಗಳನ್ನು ಹೇಳುವ ಮೂಲಕ ಲಿಂಗಾಯತ ಧರ್ಮದ ವೈಶಿಷ್ಟ್ಯಗಳನ್ನು ತಿಳಿಸಿದ್ದಾರೆ. ಹೀಗಿದ್ದೂ ವಚನಗಳಲ್ಲಿ ‘ವೀರಶೈವ’ ಪದ ಮಾತ್ರ ಹುಡುಕಲು ಹೊರಟ ವಿದ್ವಾಂಸರು ಲಿಂಗಾಯತ (ಲಿಂಗವಂತ) ಪದದ ಬಗ್ಗೆ ಚಕಾರವೆತ್ತದೇ ಇರುವುದಕ್ಕೆ ಕಾರಣವೇನು? ಇದೊಂದು ರೀತಿಯ ಜಾಣ ಮರೆವು ಎಂದೇ ಹೇಳಬೇಕು.
* ಆಯತಲಿಂಗವೆಂದರೆ ಇಷ್ಟಲಿಂಗ; ಸ್ವಾಯತಲಿಂಗವೆಂದರೆ ಪ್ರಾಣಲಿಂಗ; ಸನ್ನಿಹಿತಲಿಂಗವೆಂದರೆ ಭಾವಲಿಂಗ.
ಇತ್ತೀಚೆಗೆ ಕೆಲವರು ಉಪನಿಷತ್ತುಗಳಲ್ಲಿ ಇದ್ದುದನ್ನೆ ವಚನಕಾರರು ಕನ್ನಡದಲ್ಲಿ ಬರೆದು ಮನೆ ಮನೆಗೂ ತಲುಪಿಸಿದರು ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಇದನ್ನು ನಂಬುವವರು ಅ-ಲಿಂಗಾಯತರಿರುವಂತೆ ಲಿಂಗಾಯತರೂ ಇರುವುದು ಆಶ್ಚರ್ಯಕರವಾದರೂ ವಿಷಾದನೀಯ. ಇಂಥ ಸುಳ್ಳು ಸುದ್ದಿಗೆ ನಾವು ಮೂರು ರೀತಿಯ ಪ್ರತಿಕ್ರಿಯೆ ತೋರಿಸಬಹುದು.
1. ಈ ನಂಬಿಕೆ ಮೇಲ್ನೋಟಕ್ಕೆ ಸರಿ ಎನಿಸಿದರೂ, ಸ್ವಲ್ಪ ಒಳ ಹೊಕ್ಕು ನೋಡಿದರೆ ಇದು ಸುಳ್ಳು ಸುದ್ದಿ ಎಂಬುದು ಗೊತ್ತಾಗುತ್ತದೆ. ಉಪನಿಷತ್ಕಾರರು ಹೇಳಿದುದನ್ನೆ ವಚನಕಾರರು ಕನ್ನಡಕ್ಕೆ ಅನುವಾದಿಸಿದ್ದರೆ ಅವರ ಅನುಭಾವಕ್ಕೆ ಏನೂ ಪ್ರಾಶಸ್ತ್ಯವಿಲ್ಲ ಎಂದರ್ಥ. ಆದರೆ ಅವರು ಅಹಂ ಬ್ರಹ್ಮಾಸ್ಮಿ ಎಂಬ ಔಪನಿಷದಿಕ ಸತ್ಯವನ್ನು ಅನುಭವಿಸಿ ನಾನೇ ಲಿಂಗ ಎಂದರು. ಇದನ್ನು ಈ ಕೆಳಗಿನಂತೆ ಪ್ರಸ್ತುತಪಡಿಸಬಹುದು.
ಕಲ್ಲಪ್ಪ: ನಾನು ಸಕ್ಕರೆ ತಿಂದೆ, ಅದರ ಸಿಹಿಯನ್ನು ಅನುಭವಿಸಿದೆ.
ಮಲ್ಲಪ್ಪ: ನಾನೂ ಸಕ್ಕರೆ ತಿಂದೆ, ಅದು ಸಿಹಿಯಾಗಿದೆ.
ಇಲ್ಲಿ ಇಬ್ಬರೂ ಸಕ್ಕರೆಯ ಸಿಹಿಯನ್ನು ಅನುಭವಿಸಿ ಅದು ಸಿಹಿಯಾಗಿದೆ ಎನ್ನುತ್ತಿದ್ದಾರೆಯೇ ಹೊರತು ಒಬ್ಬ ಇನ್ನೊಬ್ಬನ ಮಾತನ್ನು ನಕಲು ಮಾಡುತ್ತಿಲ್ಲ ಎಂಬುದನ್ನು ನಾವು ಗಮನಿಸಬೇಕು. ಹಾಗೆಯೇ ಬಸವಾದಿ ಪ್ರಮಥರು ತಮ್ಮ ಸ್ವಂತ ಲಿಂಗಾನುಭವದ ಆಧಾರದ ಮೇಲೆ ಲಿಂಗಾಯತ ಧರ್ಮದ ಸಿದ್ಧಾಂತಗಳನ್ನು ರೂಪಿಸಿದರೆ ಹೊರತು ಉಪನಿಷತ್ತುಗಳ ಆಧಾರದ ಮೇಲಲ್ಲ. ಕಲ್ಲುಮಠದ ಪ್ರಭುದೇವ ಹೇಳುವ ಹಾಗೆ, ಬಸವಾದಿ ಪ್ರಮಥರ ಶಿವಾನುಭೂತಿಯೇ ವಚನಗಳಾಗಿ ಉಕ್ಕಿ ಹರಿಯಿತು. ವಚನಕಾರರ ಭಾಷೆ, ಉಪನಿಷತ್ತುಗಳ ಭಾಷೆ ಒಂದೇ ತರ ಇರಬಹುದು; ಅವುಗಳ ತತ್ತ್ವಮೀಮಾಂಸೀಯ ಸಿದ್ಧಾಂತಗಳು ಒಂದೇ ತರ ಇರಬಹುದು. ಆದರೆ ವಚನಕಾರರು ಸಹ ಉಪನಿಷತ್ಕಾರರಂತೆ ಅವುಗಳನ್ನು ಅನುಭವಿಸಿಯೇ ಬರೆದಿದ್ದಾರೆ. ಒಂದೇ ತರದ ನೋವುಂಡ ಇಬ್ಬರ ಭಾಷೆ ಒಂದೇ ತರ ಇದ್ದ ಮಾತ್ರಕ್ಕೆ ಒಬ್ಬ ಇನ್ನೊಬ್ಬನ ಮಾತನ್ನು ಅನುವಾದ ಮಾಡುತ್ತಿದ್ದಾನೆ ಎಂದರ್ಥವಲ್ಲ. ಕ್ರಿಶ್ಚಿಯನ್ ಅನುಭಾವಿಗಳ ಭಾಷೆ, ಉಪನಿಷತ್ಕಾರರ ಭಾಷೆ ಒಂದೇ ತರನಾಗಿದ್ದ ಮಾತ್ರಕ್ಕೆ ಕ್ರೈಸ್ತ ಅನುಭವಿಗಳು ಉಪನಿಷತ್ತುಗಳನ್ನು ನಕಲು ಮಾಡಿದರು ಎಂದರ್ಥವಲ್ಲ. ಇದು ಗೊತ್ತಿಲ್ಲದ ನಮ್ಮ ಕೆಲವು ಸ್ವಾಮಿಗಳು.
ಕಲ್ಲಪ್ಪನ ಹೇಳಿಕೆಯನ್ನು ಮಲ್ಲಪ್ಪ ನಕಲು ಮಾಡುತ್ತಿದ್ದಾನೆ ಎಂದು ನಂಬುತ್ತಾರೆ. ಮತ್ತು ಹಾಗೆ ಹೇಳುವ ಲಿಂಗಾಯತೇತರರ ಹೇಳಿಕೆಯನ್ನು ಪುಷ್ಟೀಕರಿಸುತ್ತಾರೆ.
2. ವಚನಗಳ ಸಿದ್ಧಾಂತಗಳಿಗೂ ಉಪನಿಷತ್ತುಗಳ ಸಿದ್ಧಾಂತಗಳಿಗೂ ವ್ಯತ್ಯಾಸವಿದೆ. ವೇದಗಳ ಕರ್ಮಕಾಂಡವು ಬಹುದೇವತಾವಾದ, ಪ್ರಾಣಿಬಲಿಯನ್ನೊಳಗೊಂಡ ಯಜ್ಞಯಾಗಾದಿಗಳ ಆಚರಣೆ, ಜಾತಿತಾರತಮ್ಯವನ್ನು ಬೋಧಿಸುತ್ತದೆ. ಏಕಂ ಸತ್ ಬಹುಧಾ ವಿಪ್ರಾಃ ವದಂತಿಃ ಮತ್ತು ಯಾಗಕ್ಕಿಂತ ತ್ಯಾಗ ಮುಖ್ಯ ಹೆಚ್ಚೆಂದು ಉಪನಿಷತ್ತುಗಳು ಹೇಳಿದರೂ, ಬ್ರಾಹ್ಮಣನಾದವನು ಯಜ್ಞ ಮಾಡಲೇಬೇಕೆಂಬ ವಿಧಿಯನ್ನು ಪಾಲಿಸಲು ಬಹುದೇವತಾವಾದ, ಯಜ್ಞಯಾಗಾದಿಗಳ ಆಚರಣೆ ಮತ್ತು ಜಾತಿತಾರತಮ್ಯವನ್ನು ಉಳಿಸಿಕೊಳ್ಳಲೇ ಬೇಕಾಯಿತು. ಎಂ.ಆರ್. ಶ್ರೀ. ಅವರು ತಮ್ಮ ವಚನಧರ್ಮಸಾರದಲ್ಲೂ ರಂ.ರಾ. ದಿವಾಕರರು ತಮ್ಮ ವಚನ ಶಾಸ್ತçರಹಸ್ಯದಲ್ಲೂ ಅನೇಕ ವಚನಗಳನ್ನು ಉದ್ಧರಿಸಿ ಅವುಗಳಿಗೂ ಉಪನಿಷತ್ತುಗಳಿಗೂ ಸೈದ್ಧಾಂತಿಕ ಸಾಮ್ಯ ಇದೆ ಎಂದು ಸಿದ್ಧ ಮಾಡಿದ್ದಾರೆ (ಆದರೆ ದಿವಾಕರರು ವಚನಗಳಲ್ಲಿ ಇತರ ಸಿದ್ಧಾಂತಗಳೂ ಇವೆ, ಅವುಗಳನ್ನು ನಾನು ಪ್ರಸ್ತಾಪಿಸುವುದಿಲ್ಲ ಎಂದಿದ್ದಾರೆ). ಈ ಇಬ್ಬರ ಕೆಲಸ ಶ್ಲಾಘನೀಯ ಕೆಲಸವೇ. ಇದಕ್ಕೆ ವಿರುದ್ಧವಾಗಿ ವಚನಕಾರರು ಏಕೈಕದೈವವಾದ, ನಿರ್ಜಾತಿವಾದ, ಶುದ್ಧ ಭಕ್ತಿ, ಅನುಭಾವ ಮತ್ತು ಕಾಯಕ-ದಾಸೋಹಗಳನ್ನೊಳಗೊಂಡ ಧರ್ಮವನ್ನು ಬೋಧಿಸಿದರು. ಉಪನಿಷತ್ತುಗಳ ಸಿದ್ಧಾಂತಗಳನ್ನು ಅನುಸರಿಸಿದ್ದಕ್ಕೆ ಯಾರಿಗೂ ಶಿಕ್ಷೆ ಆಗಲಿಲ್ಲ. ಆದರೆ ಬಸವಣ್ಣನವರ ಲಿಂಗಾಯತ ಧರ್ಮದ ಹೊಸ ಬೋಧನೆಗಳನ್ನು ಅನುಸರಿಸಿದ್ದಕ್ಕೆ, ಅಂದರೆ ವೇದಗಳಿಗೆ ವಿರುದ್ಧವಾಗಿ ಹರಳಯ್ಯನ ಮಗನಿಗೂ ಮಧುವಯ್ಯನ ಮಗಳಿಗೂ ಮದುವೆ ಮಾಡಿಸಿದುದಕ್ಕೆ ಅವರಿಗೆ ಘೋರ ಶಿಕ್ಷೆಯಾಯಿತು. ಉಪನಿಷತ್ತುಗಳಲ್ಲಿ ಇದ್ದುದನ್ನೇ ಬಸವಾದಿ ಶರಣರು ಪುನರುಚ್ಚರಿಸಿದ್ದರೆ ಕಲ್ಯಾಣ ಕ್ರಾಂತಿ ಆಗುತ್ತಿರಲಿಲ್ಲ. ರಂ.ರಾ. ದಿವಾಕರರು “ಉಪನಿಷತ್ತುಗಳಲ್ಲಿರುವುದೆಲ್ಲ ವಚನಗಳಲ್ಲಿದೆ, ಆದರೆ ವಚನಗಳಲ್ಲಿರುವುದೆಲ್ಲ ಉಪನಿಷತ್ತುಗಳಲ್ಲಿ ಇಲ್ಲ” ಎಂದು ಹೇಳಿದುದನ್ನು ನಾವು ಮರೆಯಬಾರದು.
3. ಉಪನಿಷತ್ತುಗಳಿಗೂ ವಚನಗಳಿಗೂ ದಾರ್ಶನಿಕ ಸಿದ್ಧಾಂತಗಳ ಬಗ್ಗೆ ಒಮ್ಮತ ಇರುವುದು ಸರ್ವವಿದಿತ. ಆ ಬಗ್ಗೆ ಸಾವಿರಾರು ಜನ ಬರೆದಿದ್ದಾರೆ; ಇನ್ನೂ ಬರೆಯುತ್ತಲೇ ಇದ್ದಾರೆ. ಬ್ರಹ್ಮನ್ ಒಬ್ಬನೇ, ಅವನು ಸತ್, ಚಿತ್, ಆನಂದ, ನಿತ್ಯ, ಪರಿಪೂರ್ಣ, ನಮ್ಮ ಆತ್ಮಗಳೇ ಬ್ರಹ್ಮನ ಅಂಶಗಳು, ನಾವು ಅವಿದ್ಯೆಯಿಂದಾಗಿ ನಮ್ಮ ನಿಜ ಸ್ವರೂಪವನ್ನು ಮರೆತು ಸ್ವಾರ್ಥಕ್ಕಾಗಿ ಮಾಡಿದ ಕರ್ಮಗಳ ಪರಿಣಾಮವಾಗಿ ಭವದಲ್ಲಿ ಸಿಲುಕಿಕೊಂಡಿದ್ದೇವೆ, ಅವಿದ್ಯೆಯನ್ನು ಹೋಗಲಾಡಿಸಿ, ಅರಿವನ್ನು ಪಡೆದರೆ ನಾನೇ ಬ್ರಹ್ಮ ಎಂಬುದು ಗೊತ್ತಾಗುತ್ತದೆ, ಈ ಅರಿವೇ ಮೋಕ್ಷ - ಈ ಸಿದ್ಧಾಂತಗಳೆಲ್ಲ ಉಪನಿಷತ್ತುಗಳಲ್ಲಿ ಇರುವಂತೆ ವಚನಗಳಲ್ಲಿಯೂ ಇವೆ, ಎಂಬುದನ್ನು 1927ನೆಯ ಇಸವಿಯಿಂದಲೂ ಜನರು ಬರೆಯುತ್ತಲೇ ಇದ್ದಾರೆ. ಇದನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ ಇವೆಲ್ಲ ತತ್ತ್ವಮೀಮಾಂಸೀಯ ಸಿದ್ಧಾಂತಗಳೇ ಹೊರತು ಧಾರ್ಮಿಕ ಸಿದ್ಧಾಂತಗಳಲ್ಲ. ಈ ಔಪನಿಷದಿಕ ತತ್ತ್ವಮೀಮಾಂಸೀಯ ಸಿದ್ಧಾಂತಗಳನ್ನು ಬೌದ್ಧ ಧರ್ಮವೂ ಜೈನಧರ್ಮವೂ ಸಿಖ್ ಧರ್ಮವೂ ಒಪ್ಪಿಕೊಂಡಿವೆ. ಧಾರ್ಮಿಕ ಸಿದ್ಧಾಂತಗಳನ್ನು ತುಲನಾತ್ಮಕವಾಗಿ, ವಿಮರ್ಶಾತ್ಮಕವಾಗಿ ಅಧ್ಯಯನ ಮಾಡಿದರೆ ವಚನಗಳು ಬೋಧಿಸುವ ಸಿದ್ಧಾಂತಗಳು ವೈದಿಕ ಧರ್ಮದದಿಂದ ಭಿನ್ನ ಎಂಬುದು ಯಾವ ಅವಿದ್ಯಾವಂತನಿಗೂ ಗೊತ್ತಾಗುತ್ತದೆ. ಆದರೆ ಇದು ವೈದಿಕ ಧರ್ಮ ಪ್ರಿಯರಿಗೆ ಸಹನೆ ಆಗುವುದಿಲ್ಲ. ಉಪನಿಷತ್ತುಗಳಲ್ಲಿ ಇರುವುದೆಲ್ಲಾ ವಚನಗಳಲ್ಲಿದೆ, ಅದರಲ್ಲಿ ಹೊಸತೇನೂ ಇಲ್ಲ ಎಂದು ಗಳಹುತ್ತಾರೆ. ಅವರ ಈ ನಿಲವಿಗೆ ತತ್ತ್ವವಮೀಮಾಂಸೆಯೇ ಧರ್ಮ ಎಂಬ ಅಜ್ಞಾನವೇ ಕಾರಣ. ಈ ಅಜ್ಞಾನಕ್ಕೆ ವಶವಾದವರಲ್ಲಿ ಡಾ. ಎಸ್.ಸಿ. ನಂದಿಮಠ, ಮುಂತಾದ ವಿದ್ವಾಂಸರೂ ಸೇರಿದ್ದಾರೆ. ಅವರ ಈ ನಿಲುವು ಎಷ್ಟು ಅಸಮರ್ಥನೀಯ ಎಂಬುದನ್ನು ಒಂದು ಉದಾಹರಣೆಯೊಂದಿಗೆ ತೋರಿಸಿಕೊಡಬಹುದು. ಕ್ರೈಸ್ತ ಧರ್ಮಕ್ಕೂ ಯಹೂದಿ ಧರ್ಮಕ್ಕೂ ಒಂದೇ ತತ್ತ್ವಮೀಮಾಂಸೆಯನ್ನುಳ್ಳ ಬೈಬಲ್ಲಿನ ಹಳೆ ಒಡಂಬಡಿಕೆ ಮಾನ್ಯ. ಅದರಲ್ಲಿ ದೇವರು ಒಬ್ಬನೇ, ಅವನು ಸರ್ವ ಶಕ್ತ, ಅವನ ಜಗತ್ತನ್ನು ಆರು ದಿನಗಳಲ್ಲಿ ಸೃಷ್ಟಿಸಿ ಏಳನೆಯ ದಿನ ವಿಶ್ರಾಂತಿ ತೆಗೆದುಕೊಂಡ, ಮಾನವನು ದೇವರಲ್ಲ, ಸತ್ತ ನಂತರ ದೇವನಿರುವ ಲೋಕಕ್ಕೆ ಹೋಗುವುದೇ ಆಧ್ಯಾತ್ಮಿಕ ಜೀವನದ ಗುರಿ, ಮುಂತಾದ ಸಿದ್ಧಾಂತಗಳಿವೆ. ಈ ತತ್ತ್ವಮೀಮಾಂಸೆಯನ್ನು ಒಪ್ಪಿಕೊಂಡ ಆ ಎರಡು ಧರ್ಮಗಳು ಒಂದೇ ಆಗಬೇಕಾಗಿತ್ತು. ಆದರೆ ಹಾಗಿಲ್ಲ. ಕ್ರೈಸ್ತ ಧರ್ಮ ಬೇರೆ, ಯಹೂದಿ ಧರ್ಮ ಬೇರೆ. ತಮಿಳು ಶೈವದ 36 ತತ್ವಗಳನ್ನು ಅಳವಡಿಸಿಕೊಂಡಿರುವ ಲಿಂಗಾಯತ ಧರ್ಮವು ತಮಿಳು ಶೈವರನ್ನು ಭವಿಶೈವರು, ಯಜ್ಞಯಾಗಾದಿಗಳನ್ನು ಮಾಡುವ ಶೈವ ಕರ್ಮಿಗಳು ಎಂದು ತುಚ್ಛವಾಗಿ ಕಾಣುತ್ತಾರೆ. ಅಂದಮೇಲೆ ಲಿಂಗಾಯತ ಧರ್ಮ ತಮಿಳು ಶೈವವಲ್ಲ. ಅದೇ ರೀತಿ ಬಹುದೇವತಾರಾಧನೆ, ಯಜ್ಞಯಾಗಾದಿಗಳ ಆಚರಣೆ, ಗುಡಿ ಸಂಪ್ರದಾಯ, ಜಾತಿತಾರತಮ್ಯ, ಕಾಯಕ ತಾರತಮ್ಯ, ಲಿಂಗ ತಾರತಮ್ಯ ಪಂಚಸೂತಕಗಳು, ತೀರ್ಥಯಾತ್ರೆಗಳು ಈ ಎಲ್ಲಾ ವೇದ ಪ್ರಣೀತ ಧರ್ಮಾಚರಣೆಗಳನ್ನು ನಿರಾಕರಿಸುವ ಲಿಂಗಾಯತ ಧರ್ಮವು ವೈದಿಕ ಧರ್ಮವಲ್ಲ.
ಡಾ. ಎನ್.ಜಿ. ಮಹಾದೇವಪ್ಪ
“ಚೈತನ್ಯ, ಐದನೆಯ ಅಡ್ಡರಸ್ತೆ
ಕಲ್ಯಾಣನಗರ
ಧಾರವಾಡ – 590007
ಫೋ: 94839 67829
ಸಾಮಾಜಿಕತೆ ಎನ್ನುವುದನ್ನು ಇಲ್ಲಿ ಸಮಾಜದಲ್ಲಿನ ವಿವಿಧ ಸಮುದಾಯಗಳ ನಡುವಿನ ಸಂಬಂಧವೆಂದು ಪರಿಭಾವಿಸಿಕೊಳ್ಳಲಾಗಿದೆ. ಈ ಸಂಬಂಧಗಳು ಮುಕ್ತವಾಗಿದ್ದಾವೆಯೋ ಅಥವಾ ಅಸಮಾನತೆ - ಶ್ರೇಣಿಕರಣದಿಂದ ಕೂಡಿದ್ದಾವೆಯೋ ಎಂಬುದು ಸಾಮಾಜಿಕತೆಯ ಮುಖ್ಯ ಆಯಾಮವಾಗಿದೆ. ಸಮುದಾಯಗಳ ನಡುವಿನ ಸಂಬಂಧದ ಜೊತೆಯಲ್ಲಿ ಸಮುದಾಯಗಳಲ್ಲಿನ ಗಂಡು-ಹೆಣ್ಣಿನ ನಡುವಿನ ಸಂಬಂಧವೂ ಇಲ್ಲಿ ಮುಖ್ಯವಾಗುತ್ತದೆ. ಸಮುದಾಯಗಳ ನಡುವಿನ ಸಂಬAಧವನ್ನು ನಿರ್ಧರಿಸುವ ಜಾತಿ, ಉದ್ಯೋಗ, ಆಸ್ತಿ-ಸಂಪತ್ತು, ಆಚರಣೆಗಳು ಸಂಪ್ರದಾಯಗಳು ಮುಂತಾದವು ಸಾಮಾಜಿಕತೆಯ ಭಾಗವೇ ಆಗಿವೆ. ನಮ್ಮ ಸಂದರ್ಭದಲ್ಲಿ ಬಹು ಮುಖ್ಯ ಸಾಮಾಜಿಕ ಆಯಾಮವೆಂದರೆ ಜಾತಿ ವ್ಯವಸ್ಥೆ. ಚಾತುರ್ವರ್ಣ ವ್ಯವಸ್ಥೆಯಲ್ಲಿ ಸಮಾಜ ಎನ್ನುವುದು ಒಂದೇ ಅಲ್ಲ. ಅಲ್ಲಿ ಬ್ರಾಹ್ಮಣ ಸಮಾಜವಿದೆ, ಕ್ಷತ್ರಿಯ, ವೈಶ್ಯ ಸಮಾಜಗಳಿವೆ. ಶೂದ್ರ ಸಮಾಜವಿದೆ. ಇವೆಲ್ಲವು ವರ್ಣ ವ್ಯವಸ್ಥೆಯ ಭಾಗವಾಗಿದ್ದರೆ ಇದರ ಹೊರಗೆ ಅವರ್ಣ ಸಮಾಜವಿದೆ. ಈ ಸಮಾಜಗಳ ನಡುವೆ ಕೊಡುಕೊಳೆ ಸಂಬಂಧವಿಲ್ಲ.
ವೈದಿಕತೆಯ ಸಾಮಾಜಿಕ ಆಯಾಮಗಳು ಮತ್ತು ಲಿಂಗಾಯತ ಸಾಮಾಜಿಕ ಆಯಾಮಗಳ ನಡುವೆ ಅಜಗಾಂತರ ಭಿನ್ನತೆಗಳಿವೆ.
ಸಾಮಾಜಿಕತೆಗೆ ಬೆನ್ನು ತಿರುಗಿಸಿದ ಧರ್ಮ ವೈದಿಕ ಧರ್ಮ. ಏಕೆಂದರೆ ಇದು ‘ಸೋಹಂ’ ಧರ್ಮವಾದರೆ ಲಿಂಗಾಯತವು ‘ದಾಸೋಹಂ’ ಧರ್ಮ. ವೈಯುಕ್ತಿಕ ಬಿಡುಗಡೆಯು ವೈದಿಕದ ಘನ ಉದ್ದೇಶವಾದರೆ ಲಿಂಗಾಯತವು ಸಾಮಾಜಿಕ ಸಂಗತಿಗಳ ಬಗ್ಗೆಯೂ ಚಿಂತಿಸುತ್ತದೆ. ಹಿಂದೂಧರ್ಮದಲ್ಲಿ ಬದುಕಿನಲ್ಲಿ ಸಾಧಿಸಿಕೊಳ್ಳಬೇಕಾದ ನಾಲ್ಕು ಮೌಲ್ಯಗಳಲ್ಲಿ (ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ) (ಪುರುಷಾರ್ಥಗಳು-ಪುರುಷಸೂಕ್ತದ ಹಿನ್ನೆಲೆಯಲ್ಲಿ ಇದು ಬಂದಿದೆಯೆ!) ಮೋಕ್ಷವು ಒಂದು. ಮೋಕ್ಷ ಎಂದರೆ ವೈಯುಕ್ತಿಕ ಬಿಡುಗಡೆ.
ಇಲ್ಲಿ ಸಾಮಾಜಿಕ ಜವಾಬ್ದಾರಿ ಬಗ್ಗೆ ಯಾವ ಸೂತ್ರವೂ ಇಲ್ಲ. ಈ ನಾಲ್ಕು ಪುರುಷಾರ್ಥಗಳು ವೈಯುಕ್ತಿಕ – ವ್ಯಕ್ತಿಗತ ಮೌಲ್ಯಗಳಾಗಿವೆ.
ಸಾಮಾಜಿಕತೆಗೆ ಬಗ್ಗೆ ಚಾತುರ್ವರ್ಣವು ಮೌನ ವಹಿಸಿದೆ. ಲಿಂಗಾಯತವು ಸಾಮಾಜಿಕ ಏಣಿಶ್ರೇಣಿಗಳ ಬಗ್ಗೆ ಮಾತನಾಡುತ್ತದೆ. ವೈದಿಕವು ಯಥಾಸ್ಥಿತಿ ಧರ್ಮವಾದರೆ ಲಿಂಗಾಯತವು ಚಲನಶೀಲ ಧರ್ಮ.
ಲಿಂಗಾಯತವು ಸಮಾನತೆ ಪ್ರಣಾಳಿಕೆ ಧರ್ಮವಾದರೆ, ವೈದಿಕವು ಶ್ರೇಣೀಕರಣ ಧರ್ಮ. ಚಾತುರ್ವರ್ಣ ಎನ್ನುವುದೇ ಅಸಮಾನತೆಯ ಪ್ರಣಾಳಿಕೆ. ಮೊದಲ ಮೂರು ವರ್ಣಗಳು - ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ - ಇವು ದ್ವಿಜ ವರ್ಣಗಳು. ನಾಲ್ಕನೆಯ ಶೂದ್ರ ಅದ್ವಿಜ ವರ್ಣ. ಎಲ್ಲ ವರ್ಣಗಳ ಮಹಿಳೆಯರೆಲ್ಲರೂ ಶೂದ್ರರು. ಇದಲ್ಲದೆ ಚಾತುರ್ವರ್ಣದ ಚೌಕಟ್ಟಿನಾಚೆಗೆ ದಲಿತರಿದ್ದಾರೆ- ಆದಿವಾಸಿಗಳಿದ್ದಾರೆ. ಹೀಗೆ ಚಾತುರ್ವರ್ಣವು ಮೂಲದಲ್ಲಿಯೇ, ಸೈದ್ಧಾಂತಿಕವಾಗಿಯೇ, ಆಚರಣಾತ್ಮಕವಾಗಿಯೂ ಅಸಮಾನತೆಯ ಧರ್ಮ. ಇದನ್ನು ‘ಸನಾತನ ಅಸಮಾನತೆ’ ಎಂದು ಕರೆಯಬಹುದು.
ಲಿಂಗಾಯತದಲ್ಲಿ ಕಾಯಕಗಳಲ್ಲಿ ಮೇಲು-ಕೀಳುಗಳಿಲ್ಲ. ವೈದಿಕದಲ್ಲಿ ವೃತ್ತಿಗಳಲ್ಲಿ ಮೇಲು-ಕೀಳು, ಪವಿತ್ರ-ಅಪವಿತ್ರ ಎಂಬ ಭಿನ್ನತೆಗಳಿವೆ. ವರ್ಣಾಶ್ರಮ ಧರ್ಮದಲ್ಲಿ ವೃತ್ತಿಗಳನ್ನು ಜಾತಿಗಳನ್ನಾಗಿ ಮಾಡಲಾಗಿತ್ತು. ವೈದಿಕವು ಬಹುದೇವೋಪಾಸನೆಯ ಧರ್ಮವಾದರೆ ಲಿಂಗಾಯತವು ಏಕದೇವೋಪಾಸನೆಯ ಧರ್ಮ. ಬ್ರಾಹ್ಮಣ ಧರ್ಮದಲ್ಲಿ ವರ್ಣ ಸಂಕರ ಮಹಾಪಾಪ. ಆದರೆ ವಚನ ಸಂವಿಧಾನದಲ್ಲಿ ಯಾರು ಬೇಕಾದರೂ, ಯಾವಾಗ ಬೇಕಾದರೂ ಲಿಂಗಾಯತರಾಗಬಹುದು. ಬಸವಣ್ಣನು ಲಿಂಗಾಯತದ ಏಕದೇವೋಪಾಸನೆ ತತ್ವವನ್ನು ಹೀಗೆ ಮಂಡಿಸಿದ್ದಾನೆ.
ಇಬ್ಬರು ಮೂವರು ದೇವರೆಂದು ಉಬ್ಬಿ ಮಾತನಾಡಬೇಡ,
ಒಬ್ಬನೇ ಕಾಣಿರೋ, ಇಬ್ಬರೆಂಬುದು ಹುಸಿ ನೋಡಾ!
ಕೂಡಲಸಂಗಮದೇವನಲ್ಲದಿಲ್ಲೆಂದಿತ್ತು ವೇದ.
(ಬಸವಯುಗದ ವಚನ ಮಹಾ ಸಂಪುಟ. 1. ಬಸವಣ್ಣನವರ ವಚನ ಸಂಪುಟ. ವಚನ ಸಂಖ್ಯೆ. 546)
ನಂಬಿದ ಹೆಂಡತಿಗೆ ಗಂಡನೊಬ್ಬ ಕಾಣಿರೋ,
ನಂಬಬಲ್ಲ ಭಕ್ತಂಗೆ ದೇವನೊಬ್ಬ ಕಾಣಿರೋ.
ಬೇಡ ಬೇಡ ಅನ್ಯ ದೈವದ ಸಂಗ ಹೊಲ್ಲ!
ಬೇಡ ಬೇಡ ಪರದೈವದ ಸಂಗ ಹೊಲ್ಲ!
ಬೇಡ ಬೇಡ ಅನ್ಯ ದೈವವೆಂಬುದು ಹಾದರ ಕಾಣಿರೋ,
ಕೂಡಲಸಂಗಮದೇವ ಕಂಡಡೆ ಮೂಗ ಕೊಯ್ವ ಕಾಣಿರೋ,
(ಬಸವಯುಗದ ವಚನ ಮಹಾ ಸಂಪುಟ. 1. ಬಸವಣ್ಣನವರ ವಚನ ಸಂಪುಟ. ವಚನ ಸಂಖ್ಯೆ. 617)
ದೇವನೊಬ್ಬ, ನಾಮ ಹಲವು,
ಪರಮ ಪತಿವ್ರತೆಗೆ ಗಂಡನೊಬ್ಬ.
ಮತ್ತೊಂದಕ್ಕೆರಗಿದಡೆ ಕಿವಿ-ಮೂಗ ಕೊಯ್ವನು
ಹಲವು ದೈವದ ಎಂಜಲ ತಿಂಬವರನೇನೆಂಬೆ,
ಕೂಡಲಸಂಗಮದೇವಾ!
(ಬಸವಯುಗದ ವಚನ ಮಹಾ ಸಂಪುಟ. 1. ಬಸವಣ್ಣನವರ ವಚನ ಸಂಪುಟ. ವಚನ ಸಂಖ್ಯೆ. 614)
ಕರ್ತಾರನ ಪೂಜಿಸಿ ಕುಚಿತ ದೈವಕ್ಕೆರಗುವವ
ಕತ್ತೆ ಕುದುರೆಗೆ ಹುಟ್ಟಿದ ವೇಸರನಂತೆ.
ಭಕ್ತರೆಂತೆಂಬೆ, ಭೃತ್ಯರೆಂತೆಂಬೆ, ಶರಣರೆಂತೆಂಬೆನವರ
ಎರಡುಳ್ಳ ಪ್ರಪಂಚಿಗಳ ಮೆಚ್ಚ
ಕೂಡಲಸಂಗಮದೇವಾ!
(ಬಸವಯುಗದ ವಚನ ಮಹಾಸಂಪುಟ 1. ಬಸವಣ್ಣನವರ ವಚನ ಸಂಪುಟ. ವಚನ ಸಂಖ್ಯೆ 615)
ಎರಡು ಲಿಂಗದ ನಂಬಿಕೆಯನ್ನು ವಚನಗಳಲ್ಲಿ ತಿರಸ್ಕರಿಸಲಾಗಿದೆ. ಒಂದು ವಚನದಲ್ಲಿ ಚೌಡಯ್ಯನವರು ‘ಆರು ಲಿಂಗ ಮೂರು ಲಿಂಗವೆಂಬರು, ನಮಗುಳ್ಳುದೊಂದೆ ಲಿಂಗ’ ಎಂದಿದ್ದಾರೆ
(ಬಸವಯುಗದ ವಚನ ಮಹಾಸಂಪುಟ. 1. ಸಂಕೀರ್ಣ ವಚನ ಸಂಪುಟ. 1. ವಚನ ಸಂಖ್ಯೆ. 54
ಅಂಬಿಗರ ಚೌಡಯ್ಯನವರು ಕಟ್ಟಿದ ಲಿಂಗ ಮುಖ್ಯವೇ ವಿನಾ ಬೆಟ್ಟದ ಲಿಂಗವಲ್ಲ ಎಂಬುದನ್ನು ಈ ವಚನದಲ್ಲಿ ಬಣ್ಣಿಸಿದ್ದಾರೆ.
ಕಟ್ಟಿದ ಲಿಂಗವ ಕಿರಿದು ಮಾಡಿ,
ಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ ನೋಡಾ!
ಇಂತಪ್ಪ ಲೊಟ್ಟಿಮೂಳರ ಕಂಡರೆ ಗಟ್ಟಿವುಳ್ಳ ಪಾದರಕ್ಷೆಯ ತೆಗೆದುಕೊಂಡು
ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ.
(ಬಸವಯುಗದ ವಚನ ಮಹಾಸಂಪುಟ. 1. ಸಂಕೀರ್ಣ ವಚನ ಸಂಪುಟ. 1. ವಚನ ಸಂಖ್ಯೆ. 92)
ಹೀಗೆ ಏಕದೇವೋಪಾಸನೆಯನ್ನು ವಚನಕಾರರು ವಿವಿಧ ಕ್ರಮದಲ್ಲಿ ಪ್ರತಿಪಾದಿಸಿದ್ದಾರೆ. ಬಹುದೇವೋಪಾಸಕರನ್ನು ಒಂದು ವಚನದಲ್ಲಿ ಬಸವಣ್ಣ ‘ಹಾದರ’ಕ್ಕೆ ಹೋಲಿಸಿದರೆ ಮತ್ತೊಂದು ವಚನದಲ್ಲಿ ‘ಹೇಸರಕತ್ತೆ’ಗೆ ಹೋಲಿಸುತ್ತಾನೆ. ವಚನಕಾರರಿಗೆ ದೇವರುಗಳು, ಗುಡಿಗುಡಾರಗಳ ಬಗ್ಗೆ ಎಷ್ಟೊಂದು ತಿರಸ್ಕಾರವಿತ್ತು ಎಂಬುದನ್ನು ಇದರಿಂದ ಅರ್ಥ ಮಾಡಿಕೊಳ್ಳಬಹುದು. ಅತ್ಯಂತ ಉಗ್ರರೀತಿಯಲ್ಲಿ ಬಸವಣ್ಣನು ಏಕದೇವೋಪಾಸನೆಯನ್ನು ಪ್ರತಿಪಾದಿಸಿದ್ದಾನೆ. ಬಹುದೇವೋಪಾಸಕರನ್ನು ‘ಎರಡುಳ್ಳ ಪ್ರಪಂಚಿ’ಗಳು ಎಂದು ಕರೆಯುತ್ತಾನೆ.
ವೈದಿಕ ಮತ್ತು ಲಿಂಗಾಯತ ಧರ್ಮಗಳ ನಡುವೆ ಅನೇಕ ಮಹತ್ವದ ಭಿನ್ನತೆಗಳಿವೆ. ಇದು ಒಂದಕ್ಕೊಂದು ವಿರುದ್ಧವಾಗಿವೆ. ಏಕೆಂದರೆ ವಚನಕಾರರು ವರ್ಣಾಶ್ರಮಧರ್ಮದ ಯಾವುದೇ ಅಂಶಗಳನ್ನು ಒಪ್ಪಿಕೊಳ್ಳಲಿಲ್ಲ. ಅದರ ಮೂಲ ತಾತ್ವಿಕ ಸಂಗತಿಗಳನ್ನು ವಚನ ಸಂಸೃತಿ ತಿರಸ್ಕರಿಸಿತು. ತೋಂಟದ ಸಿದ್ಧಲಿಂಗ ಶಿವಯೋಗಿಳು(16ನೆಯ ಶತಮಾನ) ತಮ್ಮ ಒಂದು ವಚನದಲ್ಲಿ ‘ವೇದಾಂತ ಸಿದ್ಧಾಂತವಪ್ಪ ತರ್ಕಮರ್ಕಟ ವಿಧಿಯ, ದರ್ಶನವಾದಿಗಳ ಪರಿವರ್ತನೆಯಲ್ಲ, ಶರಣರ ವರ್ತನೆ ಬೇರೆ’ ಎನ್ನುತ್ತಾರೆ. (ಬಸವೋತ್ತರ ಯುಗದ ವಚನ ಮಹಾಸಂಪುಟ. ಸಂಕೀರ್ಣ ವಚನ ಸಂಪುಟ. ಆರು. ವಚನ ಸಂಖ್ಯೆ 45).
ಲಿಂಗಾಯತ ಧರ್ಮಕ್ಕೆ, ಬಸವ ಸಂವಿಧಾನಕ್ಕೆ 12ನೆಯ ಶತಮಾನದಲ್ಲಿ ಯಾವ ಬಗೆಯ ವಿರೋಧ ಎದುರಾಗಿತ್ತೋ ಅಂತಹದ್ದೇ ವಿರೋಧವನ್ನು ಇಂದು ಕರ್ನಾಟಕದಲ್ಲಿ ಲಿಂಗಾಯತವು ಎದುರಿಸುತ್ತಿದೆ. ಈ ಬಗೆಯ ಹಾವಳಿಯನ್ನು ಬಸವಣ್ಣನವರು “ವಿಪ್ರಕರ್ಮ” ಎನ್ನುತ್ತಾರೆ. ಒಂದು ವಚನದಲ್ಲಿ ಅ’ವರು “ಕೂಡಲಸಂಗಮ ದೇವರು ವಿಪ್ರಕರ್ಮವ ಬಿಡಿಸಿ ಅಶುದ್ಧನ ಶುದ್ಧನ ಮಾಡಿದನಾಗಿ” ಎನ್ನುತ್ತಾರೆ. ಬಸವಣ್ಣನವರೇನೋ ಅಂದು ತಮ್ಮನ್ನು ತಾವು ಹಾಗೂ ಸಮಾಜವನ್ನು ವಿಪ್ರಕರ್ಮದ ಬಲೆಯಿಂದ ಬಸವಣ್ಣನವರು ಬಿಡಿಸಿದರು. ಆದರೆ ಇಂದು ವಿಪ್ರಕರ್ಮವೆಂಬ ಮೌಢ್ಯವು ಸಮಾಜವನ್ನು ಆವರಿಸಿಕೊಳ್ಳುತ್ತಿದೆ. ಅದು ಕುಂಭಮೇಳವಿರಬಹುದು, ಸೇಡಂನಲ್ಲಿನ ‘ಭಾರತ ಸಮಾಜ ಉತ್ಸವವಿರಬಹುದು, ವಚನ ಸಂವಿಧಾನವನ್ನು ವಿರೋಧಿಸುವುದಕ್ಕಾಗಿಯೇ ವಿಪ್ರೋತ್ತಮರು ಸಿದ್ಧಪಡಿಸಿರುವ “ವಚನ ದರ್ಶನವಿರಬಹುದು, ಬಸವಣ್ಣ ಹೊಳೆಗೆ ಹಾರಿಕೊಂಡ ಎಂಬುದಿರಬಹುದು, ಲಿಂಗಾಯತರು “ಕಟ್ಟರ್” ಎಂಬುದಿರಬಹುದು – ಇವೆಲ್ಲವೂ ವಿಪ್ರಕರ್ಮದ ಹಾವಳಿಯೇ ಆಗಿದೆ. ಬಸವಣ್ಣನವರಿಗೆ ವರ್ಣಾಶ್ರಮದ ತೊಡುಗೆಯನ್ನು ತೊಡಿಸುವುದಕ್ಕೆ, ಬಸವಣ್ಣನನ್ನು “ಬಸವಾಚಾರ್ಯನನ್ನಾಗಿ ಮಾಡಲು ಪುರೋಹಿತವರ್ಗ ಪ್ರಯತ್ನಿಸುತ್ತಿದೆ. ಸ್ವತಂತ್ರ ಧರ್ಮವಾದ ಲಿಂಗಾಯತವನ್ನು ಆಪೋಷಣೆಗೈಯ್ಯಲು ಹಿಂದೂ ಧರ್ಮವು ಪ್ರಯತ್ನಿಸುತ್ತಿದೆ. ಈ ಎಲ್ಲ ಆಕ್ರಮಣಗಳ ಹಿಂದೆ “ಅಖಲ ಭಾರತ ಸಾಂಸ್ಕೃತಿಕ ಸಂಘ” ಎಂದು ಹೇಳಿಕೊಳ್ಳುವ ಸಂಘಟನೆಯು ಇದೆ ಎಂಬುದು ಇಂದು ಲಿಂಗಾಯತರಿಗೆ ಗೊತ್ತಿದೆ.
ಲಿಂಗಾಯತವು ‘ಆಲಯ ಪ್ರಣಾಳಿಕೆ’ಯನ್ನು ಇನ್ನಿಲ್ಲದಂತೆ ತಿರಸ್ಕರಿಸಿತು. ಆದರೆ ಇಂದು ಆಲಯ ಎನ್ನುವುದು ಘರ್ಷಣೆಯ, ವಿರೋಧದ, ವಿಷಬಿತ್ತುವ ಅಸ್ತ್ರವಾಗಿ ಬಿಟ್ಟಿದೆ. ಆಲಯ ನಿರ್ಮಾಣ ಎನ್ನುವುದು ಬಂಡವಾಳ ಹೂಡಿಕೆಯ ಸಂಗತಿಯಾಗಿ ಬಿಟ್ಟಿದೆ. ಇದರ ಬಗ್ಗೆ ಲಿಂಗಾಯತ ಎಚ್ಚರದಿಂದಿರಬೇಕು. ಲಿಂಗಾಯತವು ‘ಬಯಲ’ ಸಿದ್ಧಾಂತವನ್ನು ಪ್ರತಿಪಾದಿಸಿತು. ಬಯಲು ಎಂದರೆ ಗಡಿಗಳಿಲ್ಲದ, ಬೇಲಿಯಿಲ್ಲದ, ಮುಕ್ತವಾದ ಒಂದು ಸಂಹಿತೆ. ಇಲ್ಲಿ ಎಲ್ಲರಿಗೂ ಪ್ರವೇಶವಿದೆ. ಇಲ್ಲಿ ಯಾರೂ ಅಸ್ಪೃಶ್ಯರಲ್ಲ, ಯಾವ ಕಾಯಕವೂ ಕನಿಷ್ಟವಲ್ಲ, ಈ ಬಗ್ಗೆ ಬಸವಣ್ಣನ ವಚನವನ್ನು ಪರಿಶೀಲಿಸಬಹುದು.
ದೇವ ಸಹಿತ ಭಕ್ತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸೆಗೊಂಡೆನಾದಡೆ
ನಿಮ್ಮಾಣೆ! ನಿಮ್ಮ ಪುರತರಾಣೆ! ತಲೆದಂಡ! ತಲೆದಂಡ!
ಕೂಡಲಸಂಗಮದೇವಾ
ಭಕ್ತರಲ್ಲಿ ಕುಲವನರಸಿದಡೆ ನಿಮ್ಮ ರಾಣಿವಾಸದಾಣೆ.
(ಬಸವಯುಗದ ವಚನ ಮಹಾಸಂಪುಟ. 1. ಸಂಕೀರ್ಣ ವಚನ ಸಂಪುಟ. 1. ಪುಟ: 44)
ಅಮ್ಮಿದೇವಯ್ಯ ಎನ್ನುವ ವಚನಕಾರರು ‘ಜಾತಿ ಮುಕ್ತ’, ‘ಗೋತ್ರ-ಮುಕ್ತ’ ಕಾಯಕದ ಬಗ್ಗೆ ಹೀಗೆ ಹೇಳುತ್ತಾರೆ.
ಆವಾವ ಜಾತಿ ಗೋತ್ರದಲ್ಲಿ ಬಂದಡೂ
ತಮ್ಮ ಕಾಯಕಕ್ಕೆ ಭಕ್ತಿಗೆ ಸೂತಕವಿಲ್ಲಿದಿರಬೇಕು
ಆವಾವ ವ್ರತವ ಹಿಡದಡೂ ಇದಿರ ದಾಕ್ಷಿಣ್ಯವ ಮರೆದು
ತನ್ನ ತ್ರಿಕರಣ ಶುದ್ಧನಾಗಿ ನಡೆಯಬೇಕು---
-----------------
ಕಮಳೇಶ್ವರ ಲಿಂಗ ತಾನೆಯೆಂದು ಭಾವಿಸುವುದು
(ಬಸವಯುಗದ ವಚನ ಮಹಾಸಂಪುಟ. 1. ಸಂಕೀರ್ಣ ವಚನ ಸಂಪುಟ. 1. ಪುಟ: 1198)
ಕಾಯಕದ ಆಧಾರದ ಮೇಲೆ ವ್ಯಕ್ತಿಯ ಸ್ಥಾನಮಾನವನ್ನು ಚಾತುರ್ವರ್ಣವು ನಿರ್ಣಯಿಸಿದರೆ ಲಿಂಗಾಯತದಲ್ಲಿ ಕಾಯಕದಲ್ಲಿ ಮೇಲು-ಕೀಳುಗಳಿಲ್ಲ. ಏಕೆಂದರೆ ವಚನಕಾರರು ಕಾಯಕದಲ್ಲಿ ದೇವರನ್ನು ಕಾಣುತ್ತಾರೆ. ಮಾದಾರ ಧೂಳಯ್ಯನವರು ‘ಅಟ್ಟೆಯ ಚುಚ್ಚುವ ಉಳಿಯಲ್ಲಿ ಪರಮೇಶ್ವರ’ನನ್ನು ಕಾಣುತ್ತಾರೆ.
ಲಿಂಗಾಯತ ಸಮಾಜವು ಇಂದು ಮುಗ್ದವಾಗಿ ಉಳಿದಿಲ್ಲ. ರಾಜ್ಯದಲ್ಲಿ :”2017”ರ ಹಿಂದೆ ಇದ್ದ ಲಿಂಗಾಯತ ಬೇರೆ, “2017”ರ ನಂತರದ ಲಿಂಗಾಯತ ಬೇರೆ. ಕುಂಕುಮಧಾರಿ ಲಿಂಗಾಯತರ ಕಾಲ ಮುಗಿಯಿತು. ಕರ್ನಾಟಕದಲ್ಲಿ 21ನೆಯ ಶತಮಾನವು ಲಿಂಗಾಯತ ಯುಗವಾಗಿದೆ.
ರಾಜ್ಯದ ಜನತೆಗೆ ದ್ವೇಷ ಭಾಷೆಯನ್ನು, ನಿಂದನೆಯ ಭಾಷೆಯನ್ನು. ತಿರಸ್ಕರಿಸುವ ಕರೆಯನ್ನು ಲಿಂಗಾಯತ ನೀಡುತ್ತಿದೆ. ಬಸವ ಸಂವಿಧಾನದಲ್ಲಿ “ಅಯ್ಯಾ ಎಂದರೆ ಸ್ವರ್ಗ: ಎಲವೋ ಎಂದರೆ ನರಕ”, “ದಯವೇ ಧರ್ಮದ ಮೂಲವಯ್ಯಾ” ಎಂಬುವು ಬಸವಣ್ಣನವರ ಸೂತ್ರವಾದರೆ ಸಿದ್ಧರಾಮಣ್ಣನವರು ಇದನ್ನು ಹೀಗೆ ಮಂಡಿಸಿದ್ದಾರೆ.
“ಒಬ್ಬರ ಮನವ ನೋಯಿಸಿ, ಒಬ್ಬರ ಮನವ ಘಾತವ ಮಾಡಿ, ಗಂಗೆಯ ಮುಳಿಗಿದಡೇನಾಗುವುದಯ್ಯಾ? ಚಂದ್ರನು ಗಂಗೆಯ ತಡೆಯಲ್ಲಿದ್ದಡೇನು? ಕಲಂಕ ಬಿಡದಾಯಿತ್ತಯ್ಯಾ. ಅದು ಕಾರಣ, ಮನವ ನೋಯಿಸದವನೆ, ಒಬ್ಬರ ಮನವ ಘಾತವ ಮಾಡದವನೆ ಪರಮಪಾವನ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ”
‘ಜಾತಿ’ ಎಂಬುದು ಭಾರತದ ಪ್ರಜೆಗಳಿಗೆ - ಬೇಕು ಎನ್ನುವವರಿಗೂ ಮತ್ತು ಬೇಡ ಎನ್ನುವವರಿಗೂ ಸಹ – ಗಟ್ಟಿಯಾಗಿ ಅಂಟಿಕೊಂಡಿರುವ ಕಾಣದ ಹಣೆಪಟ್ಟಿಯಾಗಿಬಿಟ್ಟಿದೆ! ಹುಟ್ಟಿನಿಂದ ಆರಂಭಗೊಂಡು, ಶಾಲಾ ಕಾಲೇಜು ದಾಖಲಾತಿ, ಮದುವೆ, ಉದ್ಯೋಗ, ರಾಜಕೀಯ ಕ್ಷೇತ್ರಗಳಿಂದ ಹಿಡಿದು ಕೊನೆಗೆ ಸಾಯುವವರೆಗೂ ಸಮಾಜ ಒಂದಲ್ಲ ಮತ್ತೊಂದು ರೀತಿಯಲ್ಲಿ ಅದನ್ನು ಪರಿಗಣಿಸುತ್ತ ಬಂದಿರುವುದು ನಮಗೆ ಕಾಣುವುದು. ಇಂತಹ ಮಹತ್ವದ ‘ಜಾತಿ’ ಎಂಬ ಪದದ ಅರ್ಥವೇನು? ‘ಜಾತಿ’ ಎಂಬ ಹಣೆಪಟ್ಟಿ ಎಷ್ಟರಮಟ್ಟಿಗೆ ಸೂಕ್ತವಾಗಿದೆ? ಅಂತಹ ಹಣೆಪಟ್ಟಿಯಿಂದ ಆಗುವ ಅನುಕೂಲ ಅಥವಾ ಅನಾನುಕೂಲಗಳು ಯಾವುವು? ಅನಾನುಕೂಲವಾಗಿದ್ದಲ್ಲಿ ಅದನ್ನು ತೆಗೆದು ಹಾಕುವುದು ಹೇಗೆ? ಇವೇ ಮುಂತಾದ ವಿಷಯಗಳನ್ನು ಇಲ್ಲಿ ಗಮನಿಸೋಣ.
‘ಜಾತಿ’ ಎಂಬ ಪದವು ಹುಟ್ಟಿನಿಂದ ಒಂದು ವಿಶಿಷ್ಠ ರೀತಿಯಲ್ಲಿ ಇರುವ ವಸ್ತು ಎಂಬುದು ನಿಘಂಟಿನ ಅರ್ಥವಾಗಿದೆ. ಉದಾಹರಣೆಗೆ, ನಾವು ನಮ್ಮ ಸುತ್ತಮುತ್ತ ಅನೇಕ ಪ್ರಕಾರದ ಗಿಡಮರಗಳನ್ನು, ಪ್ರಾಣಿ-ಪಕ್ಷಿಗಳನ್ನು, ಕ್ರಿಮಿ-ಕೀಟಗಳನ್ನು ಕಾಣುತ್ತೇವೆ. ಅವೆಲ್ಲ ಬಗೆ ಬಗೆಯ ಜಾತಿಗೆ ಸೇರಿವೆ ಎನ್ನಬಹುದು. ಮಾವು ಒಂದು ತರಹದ ಮರವಾದರೆ ಬೇವು ಮತ್ತೊಂದು ಬಗೆಯ ಮರ – ಒಂದರಿಂದ ಮತ್ತೊಂದನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಅವುಗಳನ್ನು ಬೇರೆ ಬೇರೆ ‘ಜಾತಿ’ಯ ಮರಗಳು ಎಂದು ಸಂಶಯವಿಲ್ಲದೆ ಹೇಳಬಹುದು. ಅದೇ ರೀತಿಯಲ್ಲಿ ನಾಯಿಗಳನ್ನು ಹಾಗೂ ಬೆಕ್ಕುಗಳನ್ನು ಗಮನಿಸೋಣ. ಒಂದರಿಂದ ಮತ್ತೊಂದನ್ನು ಪಡೆಯಲು ಸಾಧ್ಯವಿಲ್ಲದ ಕಾರಣ ನಾಯಿ ಮತ್ತು ಬೆಕ್ಕುಗಳನ್ನು ಬೇರೆ ಬೇರೆ ಜಾತಿಯ ಪ್ರಾಣಿಗಳು ಎಂದು ನಾವು ಗುರುತಿಸುತ್ತೇವೆ. ಈಗ ನಾಯಿಗಳ ವಿಷಯವನ್ನು ಮತ್ತಷ್ಟು ಸೂಕ್ಷ್ಮವಾಗಿ ಗಮನಿಸಿದಾಗ ಅವುಗಳಲ್ಲಿ ವಿವಿಧ ಬಣ್ಣಗಳ, ಆಕಾರದ, ಗಾತ್ರದ ನಾಯಿಗಳು ನಮಗೆ ಸಿಗುತ್ತವೆ. ಅವೆಲ್ಲ ಮೇಲ್ನೋಟಕ್ಕೆ ಭಿನ್ನವಾಗಿ ಕಂಡರೂ ಎಲ್ಲವನ್ನು ನಾಯಿ ಎಂಬ ‘ಮೂಲಜಾತಿ’ಗೆ ಸೇರಿಸಬಹುದು. ಹೀಗೆ ನಾಯಿ ಎಂಬ ಮೂಲ ಪ್ರಾಣಿ ಜಾತಿಯಲ್ಲಿ ನಾವು ಸಾವಿರಾರು ಬಗೆಯ ನಾಯಿಗಳ ಪ್ರಕಾರಗಳನ್ನು ಕಾಣಬಹುದು. ಸಾವಿರಾರು ವರ್ಷಗಳಿಂದ ಸಂಕರಗೊಳ್ಳುತ್ತ ಬಂದಂತಹ ಕೆಲವೇ ಮೂಲಜಾತಿಯ ನಾಯಿಗಳು ಈಗ ನೂರಾರು ಪ್ರಕಾರಗಳಾಗಿ ಜೀವಿಸುತ್ತಿರುವುದನ್ನು ನಾವು ಕಾಣುತ್ತೇವೆ. ಅವುಗಳನ್ನು ನಾಯಿಗಳ ‘ಉಪಜಾತಿಗಳೆಂದು’ ಕರೆಯಬಹುದು.
ಈಗ ಮನುಷ್ಯರ ವಿಷಯಕ್ಕೆ ಬರೋಣ. ಮನುಷ್ಯರೂ ಕೂಡ ಒಂದು ತರಹದ ಉನ್ನತ ಮಟ್ಟದ ಪ್ರಾಣಿಗಳೇ ತಾನೆ? ಬುದ್ದಿಶಕ್ತಿಯಲ್ಲಿ ಎಲ್ಲ ಪ್ರಾಣಿಗಳಿಗಿಂತ ಉತ್ತಮವಾದ ಪ್ರಾಣಿ ಎನ್ನಬಹುದು! ಪ್ರಾಚೀನ ಕಾಲದಲ್ಲಿ - ಅಂದರೆ ಸಾವಿರಾರು ವರ್ಷಗಳ ಹಿಂದೆ ಪರಸ್ಪರ ಸಂಪರ್ಕವಿಲ್ಲದ ಕೆಲವೇ ಕೆಲವು ಅನುಕೂಲಕರ ಪ್ರದೇಶಗಳಲ್ಲಿ ಮೂಲ ಮಾನವರು ಹುಟ್ಟಿ ಅಭಿವೃದ್ಧಿಗೊಂಡರು ಎಂದು ವಿಜ್ಞಾನಿಗಳು ಹೇಳುತ್ತಾರೆ. ಆಗ ನಾಲ್ಕೈದು ಪ್ರಕಾರದ ‘ಮೂಲಜಾತಿ’ ಮಾನವರು ಇದ್ದಿರಬಹುದು. ಇದು ಇನ್ನೂ ಸ್ಪಷ್ಟವಾಗಿಲ್ಲ. ಕೆಲವರ ವಾದದಂತೆ ಆಫ್ರಿಕಾ ಖಂಡದಲ್ಲಿ ಮೂಲ ಮಾನವರು ಮೊದಲು ಕಾಣಿಸಿಕೊಂಡರು ಎಂಬುದು. ಅಲ್ಲಿಂದ ಅವರು ವಲಸೆಯಾಗುತ್ತಾ ಯುರೋಪ್, ಏಷಿಯಾ, ಅಮೇರಿಕಾ ಮತ್ತಿತರ ಖಂಡಗಳಿಗೆ ನಂತರ ಹರಡಿಕೊಂಡರು ಎಂಬುದು ಒಂದು ನಂಬಿಕೆ. ಅದೇನೇ ಇದ್ದರೂ ಸೂಕ್ಷ್ಮವಾಗಿ ಗಮನಿಸಿದರೆ ಜಗತ್ತಿನಲ್ಲಿ ಬೆರಳೆಣಿಕೆಯಷ್ಟೇ ‘ಮೂಲ ಮಾನವ ಜಾತಿ’ಗಳನ್ನು ಮಾತ್ರ ಈಗ ನಾವು ಗುರುತಿಸಬಹುದು. ಆಕಾರದಲ್ಲಿ, ಬಣ್ಣದಲ್ಲಿ, ಮೂಳೆಗಳ ರಚನೆ ಮತ್ತಿತರ ದೈಹಿಕ ಆಧಾರದ ಮೇಲೆ, ಮಾನವರನ್ನು ನಾವು ಅಂತಹ ವಿಂಗಡನೆ ಮಾಡಬಹುದು. ಕಾಲಾನಂತರ ‘ಮೂಲಜಾತಿ’ಗಳು ಸಂಚಾರ ಮಾಡುತ್ತ ಅತಿಯಾಗಿ ಸಮ್ಮಿಶ್ರಗೊಂಡು ಸಾವಿರಾರು ‘ಉಪಜಾತಿ’ಗಳಾಗಿ ಈಗ ಮಾರ್ಪಾಡಾಗಿರುವುದನ್ನು ನಾವು ಕಾಣಬಹುದು. ಈಗ ಯಾವುದೇ ಒಂದು ಭೂಪ್ರದೇಶದಲ್ಲಿ ನೂರಾರು ‘ಉಪಜಾತಿಗಳನ್ನು ನಾವು ಗುರುತಿಸಬಹುದು. ಈಗಿನ ಪರಿಸ್ಥಿತಿಯಲ್ಲಿ ಸ್ಪಷ್ಟವಾಗಿ ಬೇರ್ಪಡಿಸಬಹುದಾದ ‘ಉಪಜಾತಿ’ಗಳನ್ನು ಗುರುತಿಸುವುದೇ ಒಂದು ಪ್ರಯಾಸದ ಕೆಲಸವಾಗಿದೆ ಎಂದೇ ಹೇಳಬಹುದು!
ಈಗ ಭಾರತ ದೇಶದ ಪರಿಸ್ಥಿತಿಯನ್ನು ನೋಡಿದಾಗ, ಇಲ್ಲಿ ಭಾರಿ ಪ್ರಮಾಣದಲ್ಲಿ ‘ಮೂಲ’ ಮತ್ತು ‘ಉಪಜಾತಿ’ಗಳ ಸಂಕರಗಳಿಂದ ಸಾವಿರಾರು ಭೌತಿಕ ಲಕ್ಷಣಗಳನ್ನು ಹೊಂದಿದ ಜನರನ್ನು ಎಲ್ಲ ಪ್ರದೇಶಗಳಲ್ಲೂ ನಾವು ಕಾಣಬಹುದು. ಆದರೂ ನಮ್ಮ ದೇಶದಲ್ಲಿ ‘ಜಾತಿ’ ಸೂಚಕ ಪದ ಬಳಕೆಯಲ್ಲಿ ಬಂದು ಬಿಟ್ಟಿದೆ! ಅದು ಹೇಗಾಯಿತು? ಭಾರತದಲ್ಲಿ ‘ಜಾತಿ’ ಪದದ ಅರ್ಥವೇನು? ‘ಜಾತಿ’ ಎಂಬ ಹಣೆಪಟ್ಟಿ ಅರ್ಥಪೂರ್ಣವಾಗಿದೆಯೇ? ಅದು ದೇಶಕ್ಕೆ ಅನುಕೂಲವಾಗಿದೆಯೇ? ಎಂಬುದನ್ನು ಈಗ ನೋಡೋಣ.
ನಮ್ಮ ದೇಶದಲ್ಲಿ ಪ್ರಚಲಿತವಿರುವ ಜಾತಿ ಸೂಚಕ ಶಬ್ದ ಉದ್ಯೋಗ ಸೂಚಕವಾಗಿ ವೈದಿಕ ಕಾಲದ ನಂತರ (ಸುಮಾರು ಮೂರು ನಾಲ್ಕು ಸಾವಿರ ವರ್ಷಗಳ ಹಿಂದಿನಿಂದ) ಜಾರಿಯಲ್ಲಿ ಬಂತು ಎಂಬುದು ಸಾಮಾನ್ಯವಾಗಿ ಎಲ್ಲರೂ ಒಪ್ಪುವಂತಹದು. ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ, ಒಬ್ಬನನ್ನು ‘ಕುಂಬಾರ ಜಾತಿ’ಯವನು ಎಂದು ಕರೆಯಲು, ಅವನು ಮಣ್ಣಿನಿಂದ ಮಡಕೆ ಇತ್ಯಾದಿಗಳನ್ನು ಮಾಡುವ ಉದ್ಯೋಗವನ್ನು ಮಾಡುವ ಮನೆತನದಲ್ಲಿ ಬಂದವನು ಎನ್ನುವುದು ಕಾರಣ. ಹಿಂದೆ ವೃತ್ತಿಗಳನ್ನು ಅಥವಾ ಕಸುಬುಗಳನ್ನು ವಂಶಪರಂಪರೆಯಾಗಿ ಮಾಡುವ ಕಾಲ ಇತ್ತು. ಅದು ಅವರಿಗೆ ಅನುಕೂಲವೂ ಆಗಿತ್ತು. ಒಂದೇ ವೃತ್ತಿ ಮಾಡುವ ಜನರಲ್ಲಿ ಸಂಬಂಧಗಳು ಬೆಳೆಯುತ್ತಿದ್ದವು. ಅವರೆಲ್ಲ ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದರು. ಆದರೆ ಕಾಲ ಬದಲಾದಂತೆ, ಜನಸಂಖ್ಯೆ ಹೆಚ್ಚಿದಂತೆ, ಚಲನೆ ಹೆಚ್ಚಿದಂತೆ, ಕುಂಬಾರಿಕೆ ಬಿಟ್ಟರೂ ಎಷ್ಟು ತಲೆಮಾರುಗಳವರೆಗೆ ಅವನ ವಂಶಸ್ಥರು ಕುಂಬಾರ ಜಾತಿಯವರಾಗಿರಬೇಕು? ಇಂತಹ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ವಿದೇಶಿಯರ ಪ್ರಭಾವ ಹೆಚ್ಚಿದಂತೆ ವಂಶಪಾರಂಪರಿಕ ವೃತ್ತಿ ಆಚರಣೆ ಬಹುತೇಕ ನಿಂತುಹೋಯಿತು. ಮುಸಲ್ಮಾನರ ಆಗಮನದ ನಂತರ ಮತ್ತು ಆಂಗ್ಲರ ಆಡಳಿತಾವಧಿಯಲ್ಲಿ ಇಂತಹ ಬದಲಾವಣೆಗಳು ಹೆಚ್ಚಾದಂತೆ ಕಾಣಿಸುತ್ತದೆ. ಒಬ್ಬ ಕುಂಬಾರನ ಮಗ ಬೆಳೆದು ಬೇರೆ ಉದ್ಯೋಗ ಮಾಡುವಂತಹ ಪ್ರಸಂಗಗಳು ಹೆಚ್ಚಾದವು. ಉದಾಹರಣೆಗೆ, ಅವನು ಸೈನ್ಯಕ್ಕೆ ಸೇರಿರಬಹುದು, ವ್ಯಾಪಾರ ಮಾಡುತ್ತ ಬೇರೆ ಪ್ರದೇಶಗಳಿಗೆ ಹೋಗಿ ನೆಲೆಸಿರಬಹುದು, ಜಮೀನು ಖರೀದಿಸಿ ವ್ಯವಸಾಯ ಮಾಡುತ್ತ ಇದ್ದಿರಬಹುದು. ಹೀಗೆ ಕುಂಬಾರಿಕೆ ಬಿಟ್ಟವನ ಮಗನ ‘ಜಾತಿ’ ಯಾವುದೆಂದು ಹೇಳಬೇಕು? ಇಂತಹ ಪ್ರಶ್ನೆಗಳಿಗೆ ನಮ್ಮ ಸಮಾಜದ ಉತ್ತರವೇನು? ನಮ್ಮ ಸರ್ಕಾರಗಳೂ ಸಹ ಇಂತಹ ಪ್ರಶ್ನೆಗಳನ್ನು ಕೇಳುತ್ತಿಲ್ಲ. ಒಬ್ಬ ವ್ಯಕ್ತಿಯ ‘ಜಾತಿ’ಯನ್ನು ನಿರ್ಧರಿಸುವ ಮಾನದಂಡಗಳು ಅವರಲ್ಲಿ ಇಲ್ಲವೇ ಇಲ್ಲ. ನಮ್ಮ ಸಮಾಜ ಮತ್ತು ಸರ್ಕಾರ ಸುಲಭವಾಗಿ ಅವರೆಲ್ಲರನ್ನೂ ‘ಕುಂಬಾರ ಜಾತಿ’ಯವರೇ ಎಂದು ಹೇಳುತ್ತ ಬಂದಿದೆ! ಇಂತಹ ತಪ್ಪು ಗ್ರಹಿಕೆ ಮುಂದುವರೆಯುತ್ತಾ ಇರುವುದರಿಂದ ಕುಂಬಾರÀನ ಮಕ್ಕಳು ಕುಂಬಾರಿಕೆ ಬಿಟ್ಟರೂ ಅವರೂ ಮತ್ತು ಅವರ ಮಕ್ಕಳೂ ತಮ್ಮ ಭವಿಷ್ಯದಲ್ಲಿ ತಪ್ಪಾಗಿ ಕುಂಬಾರ ಎಂಬ ಹಣೆಪಟ್ಟಿಯನ್ನು ಹೊರುತ್ತ ಸಾಗುವಂತಾಯಿತು! ಪರಿಣಾಮವಾಗಿ, ಪ್ರತಿಯೊಂದು ಉದ್ಯೋಗದÀಲ್ಲಿ ವಿಚಿತ್ರ ಬಗೆಯ ಗುಂಪುಗಾರಿಕೆ ಬೆಳೆಯುತ್ತಾ ಹೋಯಿತು; ಪರಿಣಾಮವಾಗಿ, ಪ್ರತಿಯೊಂದು ಉದ್ಯೋಗದಲ್ಲಿ ಜನರಲ್ಲಿ ಪರಸ್ಪರ ಹೊಂದಾಣಿಕೆ ಕಡಿಮೆ ಆಗುತ್ತಲಿದೆ. ಹೀಗೆ ಪ್ರತಿಯೊಂದು ಉದ್ಯೋಗದಲ್ಲಿಯೂ ಈಗ ಒಗ್ಗಟ್ಟಿಲ್ಲದೆ ನಾವು ಅನೇಕ ‘ಜಾತಿ’ಗಳನ್ನು ಕಾಣುವಂತಾಯಿತು! ವೃತ್ತಿ ಸಂಘಟನೆಗಳು ಶಿಥಿಲಗೊಂಡು ಸಮಾಜ ದುರ್ಬಲವಾಗುತ್ತ ಸಾಗಿದೆ. ಈಗಿನ ಸಮಾಜದಲ್ಲಿ ಹಿಂದೆ ‘ಸುಲಭದ ಕೆಲಸ’ (ಅಂದರೆ ಓದು ಬರಹದ ಆಧಾರದ ಕೆಲಸ) ಮಾಡುವ ಕೆಲವರು ಒಂದಾಗಿ ತಮ್ಮದೇ ‘ಜಾತಿ’ ಶ್ರೇಷ್ಠ ಎಂದು ಹೇಳುತ್ತ ಜಾತಿ ಸೂಚಕವನ್ನು ತಮ್ಮ ಲಾಭಕ್ಕಾಗಿ ಪಡೆದರೆ, ‘ದೈಹಿಕ ಕೆಲಸ’ ಮಾಡುವ ಬಹುತೇಕರು ಕೀಳು ಕೆಲಸ ಮಾಡುವವರು ಎಂದು ಪರಿಗಣಿಸಿ ಅವರನ್ನು ಈಗಲೂ ಕೆಳಗಿನವರು ಎಂದು ಪರಿಗಣಿಸಲಾಗುತ್ತಿದೆ. ಅಧಿಕಾರದಲ್ಲಿದ್ದ ವಿದ್ಯಾವಂತರು ಕಾನೂನುಗಳನ್ನು ಮಾಡಿ ಈಗಲೂ ಸಮಾನತೆಯ ವಿರುದ್ಧ ಮನಸ್ಥಿತಿ ಹೊಂದಿರುತ್ತಾರೆ.. ಇಂತಹ ಜಾತಿ ಸೂಚಕ ಹಣೆಪಟ್ಟಿ ಅರ್ಥಹೀನವೂ, ಭೇದಕಾರಕವೂ ಎಂದು ಎಲ್ಲರೂ ಒಪ್ಪಿದರೂ ವ್ಯವಸ್ಥೆಯ ಬದಲಾವಣೆಗೆ ಯಾರೂ ದಿಟ್ಟ ನಿಲುವನ್ನು ತಾಳುತ್ತಿಲ್ಲ; ತಾನಾಗಿಯೇ ಹೋಗಲಿ ಎಂದು ಕಾದು ಕುಳಿತಿದ್ದಾರೆ! ರಾಜಕಾರಣಿಗಳು ಕೇವಲ ಭಾಷಣಮಾಡುತ್ತ ಆಡಳಿತ ಮಾಡುತ್ತಿದ್ದಾರೆ.
ಈಗ ಸಮಾಜದ ಹಿತದೃಷ್ಟಿಯಿಂದ ನಾವೇನು ಮಾಡಬೇಕು? ಸರ್ಕಾರ ಏನು ಮಾಡಬೇಕು? ಎಲ್ಲರೂ ಒಪ್ಪುವಂತಹ, ಸರಳವಾದ ವಿಧಾನಗಳಿವೆಯೇ? ಖಂಡಿತ ಇವೆ. ಪ್ರಮುಖವಾಗಿ ಅರ್ಥಹೀನ ಹಣೆಪಟ್ಟಿಯಾದ ‘ಜಾತಿಸೂಚಕ’ವನ್ನು ಎಲ್ಲ ಅಧಿಕೃತ ದಾಖಲಾತಿಗಳಿಂದ ತೆಗೆದುಹಾಕುವುದು ಮತ್ತು ಇನ್ನು ಮುಂದೆ ಬರೆಸದಿರುವ್ಯದು ಈಗಿನಿಂದ ಆರಂಭವಾಗಬೇಕಿದೆ! ಯಾವುದೇ ಖರ್ಚಿಲ್ಲದೆ ಇದನ್ನು ಮಾಡಬಹುದು. ಅಂದರೆ ವ್ಯಕ್ತಿಯ ‘ಜಾತಿ’ ಎಂಬ ಈಗಿರುವಂತಹ ಕಾಲಂನಲ್ಲಿ ತಂದೆ ಅಥವಾ ಪೊಷಕರ ಉದ್ಯೋಗ ಅಥವಾ ಕಸುಬನ್ನು ಮಾತ್ರ ನಮೂದಿಸುವುದು. ಅದರ ಜೊತೆಗೆ ವಾರ್ಷಿಕ ಆದಾಯ, ವಾಸಿಸಿರುವ ಜಾಗ ಮತ್ತು ಅವರ ವಿದ್ಯಾರ್ಹತೆಗಳನ್ನು ಕಸುಬಿನ ಜೊತೆಗೆ ನಮೂದಿಸುವುದರಿಂದ, ಸರ್ಕಾರ ಮತ್ತು ಸಮಾಜ ನಿಜವಾಗಿಯೂ ಹಿಂದುಳಿದ ವ್ಯಕ್ತಿಗಳನ್ನು ಗುರುತಿಸಿ ಅವಶ್ಯಕತೆಯಿರುವ ಜನರಿಗೆ ಸಹಾಯ ಹಸ್ತ ಚಾಚಲು ಅನುಕೂಲವಾಗುವುದು. ಕಾನೂನಾತ್ಮಕವಾಗಿ ಜಾತಿ ಸೂಚಕವನ್ನು ಕಡೆಗಣಿಸಬೇಕಾಗಿದೆ; ಇದು ಕೇವಲ ಭಾಷಣಗಳಿಂದಾಗುವಂತಹುದಲ್ಲ.
ಅರ್ಥಹೀನ ‘ಜಾತಿ ಸೂಚಕ’ವನ್ನು ವ್ಯಕ್ತಿಗಳ ದಾಖಲೆಗಳಿಂದ ತೆಗೆದು ಹಾಕಿ, ಮುಂದೆ ಬರುವ ಪೀಳಿಗೆಗೆ ಕೇವಲ ತಂದೆ, ತಾಯಿ ಅಥವಾ ಪೋಷಕರ ಉದ್ಯೋಗ, ಆದಾಯ, ಶಿಕ್ಷಣ, ವಾಸವಿರುವ ಸ್ಥಳ ಇತ್ಯಾದಿಗಳನ್ನು ಮಾತ್ರ ಕಡ್ಡಾಯಗೊಳಿಸುವುದರಿಂದ ಅನರ್ಹ ವ್ಯಕ್ತಿಗಳು ‘ಹಿಂದುಳಿದ ಜಾತಿ’ ಹೆಸರಿನಲ್ಲಿ ವಂಚನೆಯಿಂದ ಮೀಸಲಾತಿ ಪಡೆಯುವುದನ್ನು ಕೂಡ ತಡೆಯಬಹುದಲ್ಲದೆ, ಸಮಾಜದಲ್ಲಿ ಐಕ್ಯತೆ ಮತ್ತು ಚಲನಶೀಲತೆ ಮೂಡಲು ಸಹಾಯವಾಗುವುದು. ಕೆಲವೇ ದಶಕಗಳಲ್ಲಿ ನಮ್ಮನ್ನು ಅಂಟಿಕೊಂಡಿರುವ ಈ ‘ಜಾತಿ’ ಪಿಡುಗು ನಮ್ಮಿಂದ ದೂರವಾಗಬಹುದು. ಜಾತಿ ವ್ಯವಸ್ಥೆಯನ್ನು ಹಿಂದಿನ ರಾಜ-ರಾಣಿಯರು ಕೆಲವು ಕುತಂತ್ರಿಗಳ ತರ್ಕದಿಂದ ಪ್ರಭಾವಿತರಾಗಿ ಮುಂದುವರೆಸುತ್ತಾ ಬಂದರು. ಜಾತಿ ಬೇಧಗಳನ್ನು ಪಾಲಿಸುತ್ತಾ ಬಂದರು. ಬಸವಾದಿ ಶರಣರು ಮತ್ತು ದಾಸರು ತಮ್ಮದೇ ಆದ ರೀತಿಯಲ್ಲಿ ಈ ಅರ್ಥಹೀನ ಜಾತಿ ಪಿಡಿಗಿನ ವಿರುದ್ಧ ಹೋರಾಟ ಮಾಡಿ ಸಮಾಜದಲ್ಲಿ ನೈತಿಕ ಪ್ರಜ್ಞೆ ಮೂಡುವಂತೆ ಮಾಡಿದರು. ಆದರೆ ರಾಜಾಶ್ರಯವಿಲ್ಲದ ಕಾರಣದಿಂದ ಕಾನೂನಾತ್ಮಕ ಬದಲಾವಣೆಗಳನ್ನು ತರಲು ಅವರಿಂದ ಆಗಲಿಲ್ಲ. ಶರಣರು ಸಮಾಜದಲ್ಲಿ ಕ್ರಾಂತಿಕಾರಿ ವಿಚಾರಗಳನ್ನು ಬಿತ್ತಿ ಬಹಳಷ್ಟು ಸುಧಾರಣೆಗಳನ್ನು ತಂದರು. ಆದರೆ ಅವರಿಗೆ ರಾಜಾಶ್ರಯ ಸಿಗಲಿಲ್ಲ. ಸನಾತನ ಧರ್ಮದ ಪ್ರಭಾವ ಢಾಳಾಗಿತ್ತು. ಈಗ ಕಾಲ ಬದಲಾಗಿದೆ; ಪ್ರಜಾಪ್ರಭುತ್ವ ಬಂದಿದೆ. ನಮ್ಮ ಶಾಸಕರು, ಸಮಾಜದ ಮುಖಂಡರು, ನ್ಯಾಯವಾದಿಗಳು ಹಾಗೂ ಮುಖ್ಯವಾಗಿ ಜನಸಾಮಾನ್ಯರು ಒಟ್ಟಾಗಿ ಸೇರಿ ಈ ನಿಟ್ಟಿನಲ್ಲಿ ಕೂಡಲೆ ಕಾರ್ಯಪ್ರವತ್ತರಾದರೆ ಮಹತ್ವದ ಬದಲಾವಣೆಗಳನ್ನು ತರಬಹುದು. ‘ಜಾತಿ’ ಎಂಬ ಶಬ್ದಕ್ಕೆ ಅರ್ಥಪೂರ್ಣ ವ್ಯಾಖ್ಯೆಯನ್ನು ಈಗ ಕೊಡಬೇಕಾಗಿದೆ. ಈ ಬಗ್ಗೆ ಹೆಚ್ಚಿನ ಚರ್ಚೆಗಳು ತುರ್ತಾಗಿ ನಡೆಯಬೇಕಿದೆ. ಪ್ರಜೆಗಳು ಶಾಸಕರಿಗೆ ಮಾರ್ಗದರ್ಶನ ನೀಡಬೇಕಾಗಿದೆ! ಅನುಕೂಲಕರ ಜಾತಿ ಹಣೆಪಟ್ಟಿಯನ್ನು ಹೊಂದಿದ ಜನರು ತಮ್ಮ ಸ್ಥಿತಿಗತಿಗಳು ಬದಲಾವಣೆ ಆಗಬಾರದೆಂದು ಅಂತಹ ಕಾನೂನು ವ್ಯವಸ್ಥೆಯನ್ನು ವಿರೋಧಿಸುವುದು ಸಹಜ. ಅದನ್ನು ಒಗ್ಗಟ್ಟಾಗಿ ಎದುರಿಸಿದರೆ ಸಮಾಜದಲ್ಲಿ ಮಹತ್ತರ ಬದಲಾವಣೆಗಳನ್ನು ತರಬಹುದು.
ನಿಜವಾದ ಹಿಂದುಳಿದವರಿಗೆ ಶಿಕ್ಷಣದಲ್ಲಿ ಮತ್ತು ಉದ್ಯೋಗದಲ್ಲಿ ಸಹಾಯ ಹಸ್ತ ನೀಡುತ್ತಿರುವ ಒಂದು ವ್ಯವಸ್ಥೆ ನಮ್ಮ ಮುಂದೆಯೇ ಇದೆ! ಅದು ಯಾವುದೆಂದರೆ ಅಂಗವಿಕಲರಿಗೆ ಶಿಕ್ಷಣದಲ್ಲಿ ಮತ್ತು ಉದ್ಯೋಗದಲ್ಲಿ ಕೇವಲ ಅವರ ವಿಕಲತೆ ಪ್ರಮಾಣದ ಆಧಾರದ ಮೇಲೆ ಅವರಿಗೆ ಆರಕ್ಷಣೆ ನೀಡುತ್ತಿರುವುದು. ಅವರ ವಿಕಲತೆ ಪ್ರಮಾಣವನ್ನು ತಜ್ಞ ವೈದ್ಯರು ನಿರ್ಧರಿಸಿ ಅವರಿಗೆ ಒಂದು ಪ್ರಮಾಣ ಪತ್ರ ನೀಡುತ್ತಾರೆ. ಅಲ್ಲಿ ಅವರ ‘ಜಾತಿ’ ಗಣನೆಗೆ ಬರುವುದಿಲ್ಲ! ಅಂತಹುದೇ ವ್ಯವಸ್ಥೆಯನ್ನು ಸಮಾಜದಲ್ಲಿ ಹಿಂದುಳಿದವರಿಗೆ, ಅವರ ಹಿಂದುಳಿದ ಪ್ರಮಾಣದ ಆಧಾರದ ಮೇಲೆ ಜಾತಿಯೆಂಬ ಆಧಾರವಿಲ್ಲದೇ ನೀಡುತ್ತ ಬಂದರೆ, ಜಾತಿಪ್ರಜ್ಞೆಯನ್ನು ಕೆಲವೇ ದಶಕಗಳಲ್ಲಿ ಮಾಯವಾಗಿಸಬಹುದು. ಅದರಿಂದ ಸಮಾಜದಲ್ಲಿ ಐಕ್ಯತೆ ಮತ್ತು ವ್ಯಕ್ತಿಪರ ಒಗ್ಗಟ್ಟು ಸಹ ಬಲಗೊಳ್ಳುವವು. ನಮ್ಮ ಸಮಾಜದಲ್ಲಿ ಇಂತಹ ಕಾನೂನಿನ ಕಡೆ ಎಲ್ಲರೂ ಚಿಂತನೆ ಮಾಡುತ್ತ ಆದಷ್ಟು ಜಾಗ್ರತೆಯಿಂದ ಅಂತಹ ಅರ್ಥಪೂರ್ಣ ವ್ಯವಸ್ಥೆಯನ್ನು ಜಾರಿಗೆ ತರಬೇಕಿದೆ. 12ನೆಯ ಶತಮಾನದಲ್ಲಿಯೇ ಶರಣರು ವಿಶೇಷವಾಗಿ ಬಸವಣ್ಣ, ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿ ಸಮಾನತೆಯ ಸಮಾಜದ ಸ್ಥಾಪನೆಗಾಗಿ ಶ್ರಮಿಸಿದರು. ಅವರ ಈಗಲಾದರೂ ಆದರ್ಶಗಳನ್ನು ಅನುಸರಿಸುವ ಮೂಲಕ, ನಾವು ಜಾತಿ ಸೂಚಕ ಹಣೆಪಟ್ಟಿಗಳನ್ನು ಅಧಿಕೃತ ದಾಖಲೆಗಳಿಂದ ತೆಗೆದುಹಾಕಿ, ವ್ಯಕ್ತಿಯ ಉದ್ಯೋಗ, ಕುಟುಂಬ, ಆದಾಯ, ಶಿಕ್ಷಣ ಮತ್ತು ವಾಸಸ್ಥಳದ ಆಧಾರದ ಮೇಲೆ ನೆರವು ನೀಡುವ ಮೂಲಕ ಸಮಾನತೆಯ ಸಮಾಜದ ನಿರ್ಮಾಣಕ್ಕೆ ಸಹಕರಿಸಬಹುದು. ಇದರಿಂದ ಶರಣರ ಆಶಯ ಸಾಕಾರಗೊಳ್ಳಲು ಸಾಧ್ಯವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಇದನ್ನು ಪ್ರಜ್ಞಾವಂತರೇ ಮಾಡಲು ಮುಂದಾಗಬೇಕು.
ಡಾ. ಬಸವರಾಜ ಎ. ಕಾಗಲಿ
ನಿವೃತ್ತ ಪ್ರಾಧ್ಯಾಪಕರು, ಬೆಂಗಳೂರು ವಿಶ್ವವಿದ್ಯಾಲಯ
ಫೋ: 98452 71565
ವಚನ ಸಂಸ್ಕೃತಿಯು ಉಪನಿಷತ್ತುಗಳ ಅನುವಾದವೂ ಅಲ್ಲ ಮತ್ತು ವೇದಾಗಮಗಳ ತಾತ್ಪರ್ಯವೂ ಅಲ್ಲ. ಬಸವ ಪ್ರಣೀತ ಬಸವ ಧರ್ಮವು ಸರ್ವಸ್ವಂತಂತ್ರ ಧರ್ಮ. ರಾಜ್ಯದ ಹತ್ತೆಂಟು ಬಸವ ಸಂಘಟನೆಗಳೆಲ್ಲವೂ ಒಕ್ಕೊರಲಿನಿಂದ – ಒಗ್ಗಟ್ಟಿನಿಂದ ಲಿಂಗಾಯತವು ಹಿಂದುತ್ವದ ಭಾಗವಲ್ಲವೆಂದು ಮತ್ತು ಲಿಂಗಾಯತರು ಹಿಂದೂಗಳಲ್ಲವೆಂದು ಹೇಳುತ್ತಿವೆ. ಇದನ್ನು ಕೇಳಿಸಿಕೊಳ್ಳದ ಕಿವುಡರು ಲಿಂಗಾಯತವು ವೇದಾಗಮಗಳ ಹಿಂದುತ್ವದ ಭಾಗ ಎನ್ನುತ್ತಿದ್ದಾರೆ. ಇದನ್ನು ಪ್ರತಿಪಾದಿಸಲಿಕ್ಕಾಗಿ 2024ರಲ್ಲಿ ವಿಪ್ರಕರ್ಮಿಗಳು “ವಚನ ದರ್ಶನ” ಎಂಬ ಕೃತಿಯನ್ನು ಪ್ರಕಟಸಿ ಕೆಲವು ಲಿಂಗಾಯತ ಸ್ವಾಮಿಗಳಿಂದಲೇ ಬಿಡುಗಡೆಗೊಳಿಸಿದ್ದಾರೆ. ಕರ್ನಾಟಕದ ಲಿಂಗಾಯತ ಸಂಸತ್ತರೊಬ್ಬರಿAದ ದೆಹಲಿಯಲ್ಲಿ ಸದರಿ ಕೃತಿಯನ್ನು ಬಿಡುಗಡೆಗೊಳಿಸಲಾಗಿದೆ.
ಬಸವ ಪ್ರಣೀತ ಲಿಂಗಾಯತ ಧರ್ಮವು ಸನಾತನ ಧರ್ಮವಲ್ಲ. ಬಸವಾದಿ ಶರಣರು ಚಾತುರ್ವರ್ಣ ಸಿದ್ಧಾಂತಕ್ಕೆ, ಜಾತಿ ವ್ಯವಸ್ಥೆಯನ್ನು ತಿರಸ್ಕರಿಸಿ ಜಾಗತಿಕವಾದ ಧರ್ಮವನ್ನು ಕಟ್ಟಿದ್ದಾರೆ. ನಾವು ಸಿದ್ಧಪಡಿಸಿರುವ “ವಚನ ದರ್ಶನ: ಮಿಥ್ಯ vs ಸತ್ಯ” ಕೃತಿಯಲ್ಲಿ ಹಿರಿಯ ವಿದ್ವಾಂಸರಾದ ಡಾ. ಡಿ. ಸಿ. ಪಾವಟೆ ಅವರು, ಡಾ ಜಿ ಎಸ್ ಎಸ್ ಅವರು ಹಿರೇಮಲ್ಲೂ ಈಶ್ವರನ್ ಅವರು, ಸಾಣೇಹಳ್ಳಿ ಶ್ರೀಗಳು, ತೋಂಟದ ಸಿದ್ಧರಾಮ ಸ್ವಾಮಿಗಳು, ಡಾ. ರಾಜೇಂದ್ರ ಚೆನ್ನಿ, ಡಾ. ಎಂ. ಎಸ್. ಆಶಾದೇವಿ, ಅಶೋಕ ಬರಗುಂಡಿ ಚಂದ್ರಶೇಖರ ಪಾಟೀಲ, ಡಾ. ಎಸ್. ಎಂ. ಜಾಮದಾರ್ ಮುಂತಾದವರ ಲೇಖನಗಳಿವೆ. ಡಾ. ಡಿ. ಸಿ ಪಾವಟೆ ಅವರು ತಮ್ಮ ಲೇಖನದಲ್ಲಿ ಲಿಂಗಾಯತ ಧರ್ಮದ ಪೀಠಾಧಿಪತಿಗಳ ಬಗ್ಗೆ ಹೀಗೆ ಹೇಳಿದ್ದಾರೆ. “ಉಚ್ಛಸ್ಥಾನದಲ್ಲಿರುವ ಲಿಂಗಾಯತ ಧರ್ಮದ ಪೀಠಾಧಿಪತಿಗಳು 19320ರಿಂದೀಚೆಗೆ ನಮ್ಮ ರಾಷ್ಟ್ರೀಯ ನೀತಿಯಾಗಿ ಅಂಗೀಕೃತವಾದ ಸಮಾಜವಾದಿ ತತ್ತ್ವ ಹಾಗೂ ಸಮಾಜ ಸುಧಾರಣೆಯನ್ನು ಅನುಸರಿಸುವ ಬಸವಾನುಯಾಯಿ ಜನಸಮೂಹದಿಂದ ಅದೇಕೆ ಪ್ರತ್ಯೇಕವಾಗುತ್ತಿದ್ದಾರೋ, ಅವರಿಗದ್ಯಾವ ಪಿಶಾಚಿ ಬಡೆದಿದೆಯೋ ನನಗಂತೂ ಅರ್ಥವಾಗುತ್ತಿಲ್ಲ. ಲಿಂಗಾಯತರೊಳಗೇ ತಾವು ಬ್ರಾಹ್ಮಣರಾಗಿರುವೆವೆಂದು ಅವರೇನಾದರೂ ತಿಳಿದುಕೊಂಡಿದ್ದರೆ ಅದರಂಥ ದುಃಖಕರ ಸಂಗತಿ ಮತ್ತೊಂದಿಲ್ಲ. ಈ ಬಗ್ಗೆ ಪ್ರೊ. ಎಂ. ಆರ್. ಶ್ರೀನಿವಾಸಮೂರ್ತಿ ಅವರು ಹೀಗೆ ಬರೆದಿದ್ದಾರೆ. “ಪಂಚಾಚಾರ್ಯರು ಕನ್ನಡನಾಡಿನವರೇ? ಕನ್ನಡಿಗರೇ? ಕನ್ನಡದಲ್ಲಿ ವಚನಗಳನ್ನು ಬರೆದಿದ್ದಾರೆಯೇ? ಎಂಬ ಪ್ರಶ್ನೆಗಳಿಗೆ ಉತ್ತರವನ್ನು ಖಚಿತವಾಗಿ ಹೇಳಲಾರೆವು. ವಚನಕಾರರಂತೆ ಅವರು ವಿಚಾರವಾದಿಗಳಾಗಿದ್ದಾರೆಂದೂ ಹೇಳಲು ಸಾಧ್ಯವಿಲ್ಲ. ವಚನಕಾರರಿಗೂ ಪಂಚಾಚಾರ್ಯರಿಗೂ ಕೆಲವು ವಿಷಯಗಳಲ್ಲಿ ಏಕಾಭಿಪಾಯವಿದ್ದಂತೆ ತೋರುವುದಿಲ್ಲ. ವಚನಕಾರರಂತೆ ಅವರು ಜನಜಂಗುಳಿಯೊಡನೆ ಸೇರಿ. ನೀತಿಯನ್ನು ಹೇಳಿ, ತತ್ವವನ್ನು ತಿಳಿಸಿ, ಡೊಂಕುಗಳನ್ನು ತಿದ್ದಿ, ದುರಾಚಾರಗಳನ್ನು ಖಂಡಿಸಿ ಮನುಷ್ಯರೊಡನೆ ಮನುಷ್ಯರಾಗಿ ವ್ಯವಹರಿಸಿದರೆಂದು ಹೇಳಲೂ ಸಾಧ್ಯವಿಲ್ಲ”.
ಡಾ. ಎನ್. ಜಿ. ಮಹದೇವಪ್ಪ ಅವರು ನೇರವಾಗಿ ವಿಪ್ರರ ವಚನ ದರ್ಶನಕ್ಕೆ ಮುನ್ನುಡಿ ಬರೆದಿರುವ ಡಾ. ಮಲ್ಲೇಪುರಂ ವೆಂಕಟೇಶ್ ಅವರ ‘ವೈದೇಶಿಕ ಸಮಾಜ ವಿಜ್ಞಾನ ನೆಲೆಯಲ್ಲಿ ವಚನಗಳನ್ನು ನೀಡುವುದು ಅಯುಕ್ತ’ ಎಂಬ ನಿಲುವನ್ನು ತಿರಸ್ಕರಿಸಿದ್ದಾರೆ.
ಈ ಕೃತಿಯಲ್ಲಿ 18 ವಿದ್ವಾಂಸರ ಲೇಖನಗಳಿವೆ. ಪ್ರತಿಯೊಂದು ಲೇಖನವೂ ಚಾತುರ್ವರ್ಣವನ್ನು, ಬ್ರಾಹ್ಮಣ್ಯದಲ್ಲಿನ ಅಸಮಾನತೆಯನ್ನು, ಮಹಿಳೆಯರಿಗೆ ಧಾರ್ಮಿಕ ಹಕ್ಕುಗಳನ್ನು ನೀಡದುದನ್ನು, ದುಡಿಮೆ(ಕಾಯಕ) ವಿರೋಧಿ ಪ್ರಣಾಳಿಕೆಯನ್ನು, ಲಿಂಗಾಯತರನ್ನು ಶೂದ್ರರೆಂದು, ತ್ರೆöÊವರ್ಣಿಕರ ಸೇವೆ ಮಾಡುವುದೇ ಅವರ ಧರ್ಮ ಮುಂತಾದ ಮಾನವೀಯತೆ ವಿರೋಧಿ ನಿಲುವುಗಳನ್ನ ಇನ್ನಿಲ್ಲದಂತೆ ತಿರಿಸ್ಕರಿಸಿದ್ದಾರೆ. ಡಾ. ಬಿ. ಆರ್. ಅಂಬೇಡ್ಕರ್ ಹೇಳಿರುವಂತೆ “Brahminism – caste system is very negation of the spirit of Equality, Liberty and Fraternity”.
ಆದರೆ ಲಿಂಗಾಯತವು ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವ ಮೌಲ್ಯಗಳಿಗೆ ಬದ್ಧವಾಗಿದೆ. ಬಸವ ಸಂವಿಧಾನದ ಅನೇಕ ಅಂಶಗಳು ಭಾರತ ಸಂವಿಧಾನದಲ್ಲಿ ಅಡಕವಾಗಿವೆ. ವಚನ ಸಂಸ್ಕೃತಿಯನ್ನು ವಿರೋಧಿಸುವ ಶಕ್ತಿಗಳು ಭಾರತದ ಸಂವಿಧಾನವನ್ನೂ ವಿರೋಧಿಸುತ್ತಿವೆ.
ವಿಪ್ರಕರ್ಮದ ದಾಳಿ ಲಿಂಗಾಯತದ ಮೇಲೆ ದಾಳಿಯೆಂಬುದು ನಿಜ. ಆದರೆ ಇದು ವ್ಯಾಪಕವಾದ ಆಯಾಮವನ್ನು ಹೊಂದಿದೆ.
ಈ ಕೃತಿಯಲ್ಲಿ ವಿಪ್ರ ಲೇಖಕರ, ದಾರಿ ತಪ್ಪಿದ ಲಿಂಗಾಯತ ಸ್ವಾಮಿಗಳ ಮತ್ತು ಇತರೆ ಲೇಖಕರ ಪ್ರತಿಯೊಂದು ನಿಲುವನ್ನು ಪ್ರಶ್ನೆ ಮಾಡಲಾಗಿದೆ, ಅವೆಲ್ಲವು ಆಧಾರರಹಿತ ಎಂಬುದನ್ನು ತೋರಿಸಲಾಗಿದೆ. ಡಾ, ತೋಂಟದ ಸಿದ್ಧರಾಮ ಸ್ವಾಮಿಗಳು ಆಶೀರ್ವಚನದ ರೀತಿಯಲ್ಲಿ ನಮ್ಮ ಕೃತಿಗೆ ಬರೆದಿರುವ “ಬಿನ್ನಹ”ವನ್ನು ‘ಪೂರ್ವಾಗ್ರಹ ಪೀಡಿತರ ವಚನ ದರ್ಶನ’ ಎಂದು ಕರೆದಿದ್ದಾರೆ. ಸಾಣೆಹಳ್ಳಿ ಶ್ರೀಗಳು ತಮ್ಮ ಲೇಖನಕ್ಕೆ “ವೇದಶಾಸ್ತ್ರದವರ ಹಿರಿಯರೆನ್ನೆ”… ಎಂಬ ಶೀರ್ಷಿಕೆ ನೀಡಿದ್ದಾರೆ. ನಾಡೋಜ ಗೊ. ರು. ಚನ್ನಬಸಪ್ಪ ಅವರು ಹಿನ್ನುಡಿ ನೀಡಿದ್ದಾರೆ.
ಜಾಗತಿಕ ಲಿಂಗಾಯತ ಮಹಾಸಭೆಯು ಪ್ರಕಟಿಸಿರುವ ಈ ಕೃತಿ ದಿನಾಂಕ. 2025ರ ಫೆಬ್ರವರಿ 27 ರಂದು ಬೆಂಗಳೂರಿನ ಬಸವ ಭವನದಲ್ಲಿ ಬೃಹತ್ ಕಾರ್ಯಕ್ರಮದಲ್ಲಿ ಬಿಡುಗಡೆಯಾಗುತ್ತಿದೆ.
ಪ್ರಧಾನ ಸಂಪಾದಕರು
ಡಾ. ಟಿ. ಆರ್. ಚಂದ್ರಶೇಖರ
ಸಂಪಾದಕರು
ಡಾ. ಮುಕ್ತಾ ಬಿ. ಕಾಗಲಿ
ಸಲಹಾ ಸಮಿತಿ
ಪೂಜ್ಯಶ್ರೀ ಡಾ. ಪಂಡಿತಾರಾಧ್ಯ ಸ್ವಾಮೀಜಿ
ಪೂಜ್ಯಶ್ರೀ ಡಾ. ಸಿದ್ಧರಾಮ ಸ್ವಾಮೀಜಿ
ನಾಡೋಜ ಡಾ. ಗೊ.ರು. ಚನ್ನಬಸಪ್ಪ
ಡಾ. ವೀರಣ್ಣ ರಾಜೂರ
ಡಾ. ಎನ್.ಜಿ. ಮಹಾದೇವಪ್ಪ
ಸದಸ್ಯರು
ಸಂಪಾದಕರು - ಲಿಂಗಾಯತ ದರ್ಶನ
ಸಂಪಾದಕರು - ಮಹಾಮನೆ
ಸಂಪಾದಕರು - ಶಾಂತಿ ಕಿರಣ
ಸಂಪಾದಕರು - ಶರಣ ಮಾರ್ಗ
ಸಂಪಾದಕರು - ಬಯಲು
ಸಂಪಾದಕರು - ಲಿಂಗಾಯತ ಕ್ರಾಂತಿ
ಸಂಪಾದಕರು - ಸಾದರ ವಾಣಿ
ಸಂಪಾದಕರು - ನೊಳಂಬ ವಾಣಿ
ಸಂಪಾದಕರು - ವೀರಶೈವ ವಾಣಿ
JLM ವಾರ್ತಾ ಪತ್ರಿಕೆಗೆ ಲೇಖಕರು ತಮ್ಮ ಲೇಖನಗಳನ್ನು ಕಳಿಸಲು ಬಯಸುವರು ಮತ್ತು ನಮ್ಮ ಸಂಪರ್ಕ ಮಾಡಬಯಸುವವರು ಕೆಳಗಿನ "ವಾರ್ತಾ ಪತ್ರಕ್ಕೆ ಲೇಖನಗಳ ಸಲ್ಲಿಕೆಗಾಗಿ ಮಾರ್ಗಸೂಚಿಗಳು" ವಿಭಾಗದಲ್ಲಿರುವ ವಿವರಗಳನ್ನು ಓದಿಕೊಳ್ಳಲು ವಿನಂತಿ.
ಶರಣ ತತ್ತ್ವಗಳ ಅಧ್ಯಯನ, ಪ್ರಚಾರ, ಮತ್ತು ತಾತ್ವಿಕ ಮೌಲ್ಯಗಳ ಬೋಧನೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯು ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದೆ. ಶರಣ ಸಂಸ್ಕೃತಿ, ತತ್ತ್ವಚಿಂತನೆ, ಹಾಗೂ ಸಮಾಜಸೇವೆಗೆ ಸoಬoಧಿಸಿದ ಮಾಹಿತಿಯನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸುವವುದು ಈ ವಾರ್ತಾ ಪತ್ರದ ಉದ್ದೇಶವಾಗಿದೆ.
ವಾರ್ತಾ ಪತ್ರದ ಉದ್ದೇಶಗಳು
- ಶರಣ ತತ್ತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಶರಣ ತತ್ವದ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುವುದು ಮತ್ತು ಅದರ ಸಮಕಾಲೀನ ಪ್ರಸ್ತುತತೆಯನ್ನು ಪರಿಚಯಿಸುವುದು.
- ಶರಣ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳು, ಚಟುವಟಿಕೆಗಳು ಮತ್ತು ಪ್ರೇರಣಾದಾಯಕ ಕಾರ್ಯಗಳನ್ನು ಉತ್ತೇಜಿಸುವುದು.
- ಶರಣ ಪರಂಪರೆಯ ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಯನ್ನು ಹಂಚಿಕೊಳ್ಳಲು ವೇದಿಕೆಯನ್ನು ಒದಗಿಸುವುದು.
ವಾರ್ತಾ ಪತ್ರದ ವಿವಿಧ ವಿಭಾಗ
- ಸಂಪಾಕೀಯ ಲೇಖನ: ಪ್ರತಿಯೊಂದು ಸಂಚಿಕೆಯ ಉದ್ದೇಶವನ್ನು ಪ್ರತಿಬಿಂಬಿಸುವ ಬರಹ
- ವಿಶೇಷ ಲೇಖನಗಳು: ಶರಣ ತತ್ತ್ವ, ಮಹತ್ವದ ವ್ಯಕ್ತಿಗಳು ಮತ್ತು ಅವರ ಚಿಂತನೆಯ ಆಳವಾದ ವಿಶ್ಲೇಷಣೆ.
- ಶರಣ ಕಲೆ ಮತ್ತು ಸಂಸ್ಕೃತಿ: ಶರಣ ಪರಂಪರೆಯ ಕಲಾತ್ಮಕ ಅಭಿವ್ಯಕ್ತಿಗಳು, ಸಂಗೀತ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಪರಿಚಯ.
- ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ಸಂದೇಶ: ಸಂಸ್ಥೆಯ ಚಟುವಟಿಕೆಗಳ ಪ್ರಗತಿಯನ್ನು ಹಂಚಿಕೊಳ್ಳುವ ಭಾಗ.
- ಸಮುದಾಯದ ಅನುಭವಗಳು: ಶರಣ ತತ್ತ್ವವನ್ನು ಅನುಸರಿಸಿದ ಜನರ ಅನುಭವಗಳು, ಹಾಗೂ ಶರಣ ಸಂಸ್ಕೃತಿಗೆ ಅವರ ಕೊಡುಗೆ.
- ಮುಂಬರುವ ಕಾರ್ಯಕ್ರಮಗಳು: ಪ್ರಮುಖ ಕಾರ್ಯಕ್ರಮಗಳು, ಕಾರ್ಯಾಗಾರಗಳು, ಹಾಗೂ ಚರ್ಚೆಗಳ ವಿವರಗಳು.
- ದೃಶ್ಯಮೂಲಗಳು: ಶರಣ ಪರಂಪರೆಯನ್ನು ವಿಸ್ತೃತವಾಗಿ ಅರ್ಥಮಾಡಿಕೊಳ್ಳಲು ಸಹಾಯಕವಾಗುವ ಚಿತ್ರಗಳು, ಟೈಮ್‌ಲೈನ್‌ಗಳು, ಹಾಗೂ ಕಲಾಕೃತಿಗಳು.
ಪ್ರಕಟನಾ ವೇಳಾಪಟ್ಟಿ
- ವಾರ್ತಾ ಪತ್ರವನ್ನು ತಿಂಗಳಿಗೊಮ್ಮೆ ಅಥವಾ ತ್ರೈಮಾಸಿಕವಾಗಿ ಪ್ರಕಟಿಸಲಾಗುವುದು.
- ಲೇಖನ ಸಂಗ್ರಹ, ಸಂಪಾದನೆ ಮತ್ತು ಪರಿಷ್ಕರಣೆಗೆ ಒಂದು ನಿಗದಿತ ಸಮಯಕ್ರಮ ಅನುಸರಿಸಲಾಗುವುದು.
ವಿತರಣಾ ಮತ್ತು ಸಂಪರ್ಕ
- ನ್ಯೂಸ್‌ಲೆಟರ್ ಪ್ರಾಥಮಿಕವಾಗಿ ನಮ್ಮ ಸಂಸ್ಥೆಯ www.jlms.in ಈ ವೆಬ್-ಸೈಟಿನಲ್ಲಿ ಡಿಜಿಟಲ್ ರೂಪದಲ್ಲಿ ಲಭ್ಯವಾಗುವಂತೆ ಮಾಡಲಾಗುವುದು.
- ಗ್ರಾಮೀಣ ಸಮುದಾಯಗಳಿಗೂ ಸುಲಭವಾಗಿ ತಲುಪಲು, ಸರಳ ಭಾಷೆ ಮತ್ತು ಸುಂದರ ವಿನ್ಯಾಸವನ್ನು ಅನುಸರಿಸಲಾಗುವುದು.
ಓದುಗರ ಪ್ರತಿಕ್ರಿಯೆ
- ಓದುಗರ ಅಭಿಪ್ರಾಯವನ್ನು ಸಂಗ್ರಹಿಸಲು ಪ್ರತಿಕ್ರಿಯಾ ವ್ಯವಸ್ಥೆಯನ್ನು ರಚಿಸಲಾಗುವುದು.
- ಇದು ನ್ಯೂಸ್‌ಲೆಟರ್‌ನ ಗುಣಮಟ್ಟವನ್ನು ನಿರಂತರವಾಗಿ ಸುಧಾರಿಸಲು ಸಹಾಯ ಮಾಡಲಿದೆ.
ಕೊನೆಯದಾಗಿ
ಶರಣ ತತ್ತ್ವವನ್ನು ಸಮುದಾಯದೊಳಗೆ ವಿಸ್ತರಿಸುವ ಮಹತ್ವದ ಹೆಜ್ಜೆಯೇ ಈ ವಾರ್ತಪತ್ರ.
ಶಿಕ್ಷಣ, ಜನಸಂಪರ್ಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನಾಗಿ ಇದು ಪರಿವರ್ತಿಸುವ ಕೆಲಸ ಮಾಡುವ ಮೂಲಕ ಶರಣ ತತ್ವಗಳ ಪ್ರಚಾರದಲ್ಲಿ ಪ್ರಮುಖ ಪಾತ್ರವಹಿಸಲಿದೆ.
ಪ್ರಿಯ ಲೇಖಕರೆ,
ಜಾಗತಿಕ ಲಿಂಗಾಯತ ಮಹಾಸಭಾ ನ್ಯೂಸ್‌ಲೆಟರ್‌ಗೆ ಲೇಖನಗಳನ್ನು ಬರೆಯಲು ತಮ್ಮನ್ನು ಆಹ್ವಾನಿಸಲಾಗುತ್ತಿದೆ.
ಗುಣಮಟ್ಟ ಮತ್ತು ಸೊಗಸನ್ನು ಕಾಪಾಡಲು ದಯವಿಟ್ಟು ಈ ಮಾರ್ಗಸೂಚಿಗಳನ್ನು ಅನುಸರಿಸಿ:
ವಿಷಯದ ಕೇಂದ್ರಬಿಂದು
- ಲೇಖನಗಳು ಲಿಂಗಾಯತ ಧರ್ಮ, ವಚನ ತತ್ತ್ವ, ಶರಣ ಸಂಸ್ಕೃತಿ, ಸಾಮಾಜಿಕ ನ್ಯಾಯ, ಆಧ್ಯಾತ್ಮಿಕ ಚಿಂತನೆ, ಅಥವಾ ಸಮುದಾಯಕ್ಕೆ ಪ್ರಸ್ತುತವಾದ ವಿಷಯಗಳನ್ನು ಒಳಗೊಂಡಿರಬೇಕು.
- ಲೇಖನದ ವಿಷಯ ಬಸವ ತತ್ತ್ವ ಮತ್ತು ಶರಣ ಸಿದ್ಧಾಂತಗಳಿಗೆ ಅನುಗುಣವಾಗಿರಬೇಕು.
ಲೇಖನಗಳು JLM ವಾರ್ತಪತ್ರಕ್ಕಾಗಿಯೇ ಇರಬೇಕು
- ಲೇಖನ ಸ್ವಂತ ಬರಹವಾಗಿರಬೇಕು, ಕೃತಿಚೌರ್ಯ ತಡೆಯಬೇಕು.
- ಉಲ್ಲೇಖಗಳು ಇದ್ದರೆ ಸರಿಯಾಗಿ ನಮೂದಿಸಬೇಕು.
- ವಚನಗಳು ಅಥವಾ ಇತಿಹಾಸಿಕ ಉಲ್ಲೇಖಗಳನ್ನು ಬಳಸಿದರೆ, ಅವುಗಳನ್ನು ಸರಿಯಾಗಿ ಉಲ್ಲೇಖಿಸಬೇಕು.
ರಚನೆ ಮತ್ತು ಪ್ರಸ್ತುತಿ
- ಸ್ಪಷ್ಟವಾದ ಶೀರ್ಷಿಕೆ ನೀಡಬೇಕು, ಅದು ಲೇಖನದ ಮೂಲಭೂತ ಆಶಯವನ್ನು ಪ್ರತಿಬಿಂಬಿಸಬೇಕು.
- ಲೇಖಕರ ವಿವರಗಳು (ಹೆಸರು, ಹುದ್ದೆ, ಸಂಸ್ಥೆ, ಸಂಪರ್ಕ ಮಾಹಿತಿ) ಲಿಪಿಯಲ್ಲಿರಬೇಕು.
- ಲೇಖನವು ಸರಳವಾಗಿರಬೇಕು. ಅಗತ್ಯವಿದ್ದರೆ ಉಪಶೀರ್ಷಿಕೆಗಳನ್ನು ಬಳಸಬಹುದು.
ಭಾಷೆ ಮತ್ತು ವಿನ್ಯಾಸ
- ಲೇಖನಗಳನ್ನು ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಸಲ್ಲಿಸಬಹುದು.
- ದಾಖಲೆ ಸ್ವರೂಪ: ಕಂಪ್ಯೂಟರನಲ್ಲಿ Microsoft Word ಫೈಲ್ (.doc/.docx) ನಲ್ಲಿ ಟೈಪ್ ಮಾಡಿರಬೇಕು
- ಕನ್ನಡ: ಯೂನಿಕೋಡ ಫಾಂಟ್ ಮಾತ್ರ ಬಳಸಬಹುದು. (ನುಡಿ ಮತ್ತು ಬರಹ ಬಳಸಬೇಡಿ)
- ಇಂಗ್ಲಿಷ್: Times New Roman ಫಾಂಟ್ ಬಳಸಬೇಕು.
- ಪದಸಂಖ್ಯೆ: 500-1000 ಪದಗಳ ಮಟ್ಟಿಗೆ (ವಿಶೇಷ ಸಂದರ್ಭಗಳಲ್ಲಿ ಹೆಚ್ಚು ಸ್ವೀಕರಿಸಬಹುದು).
ಸಲ್ಲಿಕೆಯ ವಿಧಾನ
- ನಿಮ್ಮ ಲೇಖನವನ್ನು MS Word ಫೈಲ್ ಅಟಾಚ್‌ಮೆಂಟ್ ಆಗಿ ಕೆಳಗೆ ಕೊಟ್ಟಿರುವ ಇಮೇಲ್ ವಿಳಾಸಕ್ಕೆ ಕಳುಹಿಸಿ.
- ವಿಷಯ ಪಂಕ್ತಿಯಲ್ಲಿ: Newsletter Article ವಾರ್ತಾ ಪತ್ರಿಕೆ ಲೇಖನ ಎಂದು ನಮೂದಿಸಿ.
- ಪ್ರಕಟಣಾ ದಿನಾಂಕಕ್ಕಿಂತ ಕನಿಷ್ಠ 10 ದಿನಗಳ ಮುಂಚಿತವಾಗಿ ಸಲ್ಲಿಕೆ ಮಾಡಬೇಕು.
ವಿಮರ್ಶೆ ಮತ್ತು ಅನುಮೋದನೆ
- ಸಂಪಾದಕೀಯ ತಂಡವು ಲೇಖನದ ಸಂಬಂಧಿಸಿದಂತೆ, ಗುಣಮಟ್ಟ ಮತ್ತು ಸ್ಪಷ್ಟತೆ ಆಧರಿಸಿ ಪರಿಷ್ಕರಣೆ ಅಥವಾ ತಿರಸ್ಕರಣೆ ಮಾಡುವ ಹಕ್ಕನ್ನು ಹೊಂದಿರುತ್ತದೆ.
- ಅನುಮೋದನೆಗೊಂಡ ಲೇಖನಗಳು ಮುಂದಿನ ನ್ಯೂಸ್‌ಲೆಟರ್‌ನ ಸಂಚಿಕೆಯಲ್ಲಿ ಪ್ರಕಟಿಸಲಾಗುತ್ತವೆ.
ನಮ್ಮ ಸಂಪರ್ಕ
- ನಿಮ್ಮ ಅಮೂಲ್ಯ ಕೊಡುಗೆಗಳ ಮೂಲಕ ಲಿಂಗಾಯತ ಸಮುದಾಯಕ್ಕೆ ಶಕ್ತಿ ತುಂಬುವ ಸಂಕಲ್ಪದಲ್ಲಿ ಭಾಗಿಯಾಗಲು ತಮ್ಮನ್ನು ಆತ್ಮೀಯವಾಗಿ ಆಹ್ವಾನಿಸುತ್ತೇವೆ.
- ಯಾವುದೇ ಪ್ರಶ್ನೆಗಳಿದ್ದರೆ ದಯವಿಟ್ಟು ಸಂಪರ್ಕಿಸಿ:
ಡಾ. ಟಿ.ಆರ್. ಚಂದ್ರಶೇಖರ - 94490 29311
ಡಾ. ಮುಕ್ತಾ ಬಿ. ಕಾಗಲಿ - 98456 89845 - ಲೇಖಕರು ತಮ್ಮ ಲೇಖನಗಳನ್ನು ನಮ್ಮ ಕೆಳಗಿನ ಇಮೇಲ್ ಮೂಲಕ ಕಳುಹಿಸಬಹುದು.
mukthabk@gmail.com
jlmnewsletter@gmail.com